ಭಾನುವಾರ, ಫೆಬ್ರವರಿ 28, 2021
31 °C
ಅಧಿಕಾರಿಗಳ ಮನೆಯಲ್ಲೇ ಹಸಿ ಕಸದಿಂದ ಕಾಂಪೋಸ್ಟ್‌ ತಯಾರಿ ಕಡ್ಡಾಯ

ಕಸ ಸಂಸ್ಕರಣೆ: ಬಿಬಿಎಂಪಿ ಮೇಲ್ಪಂಕ್ತಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಬಳಸಿ ಕಾಂಪೋಸ್ಟ್‌ ತಯಾರಿಸುವುದಕ್ಕೆ ಉತ್ತೇಜನ ನೀಡಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಜನರಿಗೆ ತಿಳಿ ಹೇಳುವ ಮುನ್ನ ಪಾಲಿಕೆ ಅಧಿಕಾರಿಗಳು ಮನೆಯಲ್ಲಿನ ಹಸಿ ಕಸ ಬಳಸಿ ಸ್ವತಃ ಸಾವಯವ ಗೊಬ್ಬರ ತಯಾರಿಸಬೇಕು ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಪೌರ ಘನತ್ಯಾಜ್ಯ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮ 2000 ಹಾಗೂ ಘನ ತ್ಯಾಜ್ಯ ನಿರ್ವಹಣೆ ನಿಯಮ 2016ರ ಪ್ರಕಾರ ಕಸವನ್ನು ಮೂಲದಲ್ಲೇ ಬೇರ್ಪಡಿಸುವುದು, ಸಾಧ್ಯವಾದಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡುವುದು ಕಡ್ಡಾಯ. ಮರುಬಳಕೆ ಸಾಧ್ಯವೇ ಇಲ್ಲದ ತ್ಯಾಜ್ಯವನ್ನು ಮಾತ್ರ ಭೂಭರ್ತಿ ಘಟಕದಲ್ಲಿ ವಿಲೇವಾರಿ ಮಾಡಬೇಕು. ಈ ನಿಯಮ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಪಾಲಿಕೆ ಮನೆಯಲ್ಲಿ ಉಂಟಾಗುವ ಕಸವನ್ನು ನೈರ್ಮಲ್ಯ ತ್ಯಾಜ್ಯ, ಒಣ ಕಸ ಹಾಗೂ ಹಸಿ ಕಸ ಎಂದು ಮೂರು ಬಗೆಯಲ್ಲಿ ವಿಂಗಡಿಸಲು ಸೂಚಿಸಿತ್ತು.

ಜನರಿಗೆ ಮಾದರಿ ಆಗಿರಬೇಕಾದ ಅಧಿಕಾರಿಗಳೇ →ಮನೆಯಲ್ಲಿ ಕಸವನ್ನು ವಿಂಗಡಣೆ ಮಾಡುತ್ತಿರಲಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ಮೇರೆಗೆ ರಚಿಸಿರುವ ರಾಜ್ಯಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ ಅಡಿ ನೇತೃತ್ವದಲ್ಲಿ ಜಿಕೆವಿಕೆ ಪ್ರಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. 

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಮಂಜುನಾಥ ಪ್ರಸಾದ್‌ ಅವರು, ‘ಕಸ ವಿಲೇವಾರಿ ನಿಯಮಗಳನ್ನು ಅಧಿಕಾರಿಗಳು ಮೊದಲು ಪಾಲಿಸಬೇಕು. ಮನೆಯಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್‌ ಬಿನ್‌ ಇಟ್ಟುಕೊಳ್ಳಬೇಕು. ಕೋಕೊಪಿಟ್‌ ಬಳಸಿ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಬೇಕು. ಈ ಗೊಬ್ಬರವನ್ನು ಮನೆಯ ಕೈತೋಟಕ್ಕೆ ಬಳಸಬಹುದು ಅಥವಾ ಸಮೀಪದ ಉದ್ಯಾನಗಳಿಗೆ ನೀಡಬಹುದು. ಮರುಬಳಕೆ ಸಾಧ್ಯವಿಲ್ಲದ ಒಣ ತ್ಯಾಜ್ಯವನ್ನು ಪಾಲಿಕೆ ವಾಹನಕ್ಕೆ ಅಥವಾ ತ್ಯಾಜ್ಯ ಮರುಬಳಕೆದಾರರಿಗೆ ನೀಡಬಹುದು’ ಎಂದು ಸೂಚಿಸಿದ್ದಾರೆ.

ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಣ್ಣು, ತರಕಾರಿ ಖರೀದಿಗೆ ಪ್ಲಾಸ್ಟಿಕ್‌ ಚೀಲ ಬಳಸುವಂತಿಲ್ಲ. ಕಡ್ಡಾಯವಾಗಿ ಬಟ್ಟೆ ಚೀಲಗಳನ್ನೇ ಬಳಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ. ಕಸ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಬಗ್ಗೆ ಜುಲೈ 31ರ ಒಳಗೆ ಅನುಪಾಲನಾ ವರದಿಯನ್ನೂ ನೀಡಬೇಕು ಎಂದು ಸೂಚಿಸಿದ್ದಾರೆ. ಇತರ ಸರ್ಕಾರಿ ಇಲಾಖೆಗಳ ನೌಕರರು ಇದನ್ನು ಪಾಲಿಸುವಂತಾಗಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೂ ಪತ್ರ ಬರೆದಿದ್ದಾರೆ.

‘ಮೂರು ವರ್ಷಗಳಿಂದ ನಾನು ಮನೆಯ ಕಸವನ್ನು ಪಾಲಿಕೆಯ ಪೌರ ಕಾರ್ಮಿಕರಿಗೆ ನೀಡುತ್ತಿಲ್ಲ. ಮನೆಯ ಹಸಿ ಕಸವನ್ನು ಬಳಸಿ ಕಾಂಪೋಸ್ಟ್‌ ತಯಾರಿಸುತ್ತಿದ್ದೇನೆ. ಊರಿನ ಜನರಿಗೆ ಬುದ್ಧಿ ಹೇಳಬೇಕಾದ ಪಾಲಿಕೆ ಅಧಿಕಾರಿಗಳು ಮಾದರಿ ಆಗಿರಬೇಕು. ಕಸ ವಿಂಗಡಣೆ ಬಗ್ಗೆ ಕೇವಲ ಉಪದೇಶ ಮಾಡುವ ಬದಲು ಕಾರ್ಯರೂಪದಲ್ಲಿ ತೋರಿಸಬೇಕು ಎಂಬ ಉದ್ದೇಶದಿಂದ ಈ ಆದೇಶ ಮಾಡಿದ್ದೇನೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆ ಕಚೇರಿಗಳಲ್ಲೂ ಕಾಂಪೋಸ್ಟ್‌’

‘ಬಿಬಿಎಂಪಿಯ ಎಲ್ಲ ಕಚೇರಿಗಳಲ್ಲೂ ಇನ್ನು ನೈರ್ಮಲ್ಯ ಕಸ, ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ ಮೂರು ಪ್ರತ್ಯೇಕ ಬಿನ್‌ಗಳಲ್ಲಿ ಸಂಗ್ರಹಿಸಬೇಕು. ಹಸಿಕಸವನ್ನು ಬಳಸಿ ಕಚೇರಿ ಆವರಣದಲ್ಲೇ ಕಾಂಪೋಸ್ಟ್ ತಯಾರಿಸಬೇಕು’ ಎಂದು ಆಯುಕ್ತರು ಸೂಚಿಸಿದ್ದಾರೆ.

ಪ್ಲಾಸ್ಟಿಕ್‌ ಮತ್ತಿತರ ಮರುಬಳಕೆ ಯೋಗ್ಯ ವಸ್ತುಗಳನ್ನು ನೋಂದಾಯಿತ ಪುನರ್ಬಳಕೆದಾರರಿಗೆ ಒಪ್ಪಿಸಬೇಕು ಎಂದೂ ಸಲಹೆ ನೀಡಿದ್ದಾರೆ.

***

ಸದ್ಯ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಈ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳುತ್ತೇವೆ. ಇತರ ಇಲಾಖೆಗಳ ಅಧಿಕಾರಿಗಳು ಇದನ್ನು ಪಾಲಿಸಿದರೆ ಒಳ್ಳೆಯದು.

– ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು