ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ನೌಕರ ಕೋವಿಡ್‌ನಿಂದ ಸಾವು; ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

Last Updated 2 ಅಕ್ಟೋಬರ್ 2021, 11:09 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ನೌಕರ ಪ್ರಸನ್ನಕುಮಾರ್ ಎಂಬುವರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪತ್ನಿ ವಸಂತಾ ಹಾಗೂ ಮಕ್ಕಳಿಬ್ಬರು ಶುಕ್ರವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ಬೆಂಗಳೂರು ಉತ್ತರ ತಾಲ್ಲೂಕಿನ ಪ್ರಕೃತಿ ಬಡಾವಣೆಯಲ್ಲಿ ವಾಸವಿದ್ದ ವಸಂತಾ, ಅವರ ಮಕ್ಕಳಾದ ನಿಶ್ಚಿತಾ (6) ಹಾಗೂ ಯಶವಂತ್ (15) ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮರಣ ಪತ್ರ ಸಿಕ್ಕಿದೆ’ ಎಂದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಹೇಳಿದರು.

‘ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪ್ರಸನ್ನಕುಮಾರ್, ಬಿಎಂಟಿಸಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ವಸಂತಾ ಅವರನ್ನು ಮದುವೆಯಾಗಿತ್ತು. ಪ್ರಕೃತಿ ಬಡಾವಣೆಯಲ್ಲಿ ಮನೆ ಖರೀದಿಸಿದ್ದ ಪ್ರಸನ್ನಕುಮಾರ್, ₹ 20 ಲಕ್ಷ ಸಾಲ ಮಾಡಿಕೊಂಡಿದ್ದರು.’

‘ಕೊರೊನಾ ಸೋಂಕು ತಗುಲಿದ್ದರಿಂದ ಪ್ರಸನ್ನ ಕುಮಾರ್, 2020ರ ಆಗಸ್ಟ್ 7ರಂದು ಸಾವಿಗೀಡಾಗಿದ್ದರು. ಇದರಿಂದ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ಹಾಗೂ ಬಿಎಂಟಿಸಿಯಿಂದ ಯಾವುದೇ ಪರಿಹಾರವೂ ಸಿಕ್ಕಿರಲಿಲ್ಲ’ ಎಂದೂ ಪೊಲೀಸರು ತಿಳಿಸಿದರು.

‘ಸಾಲಗಾರರ ಕಾಟ ಹೆಚ್ಚಾಗಿತ್ತು. ಮಾನಸಿಕವಾಗಿ ನೊಂದ ವಸಂತಾ, ಮಕ್ಕಳ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಈ ಸಾವಿಗೆ ನಾವೇ ಕಾರಣ. ನನ್ನ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನವರು ಅಂತ ಯಾರೂ ಇಲ್ಲ. ಈ ಮನೆ ಮಾರಾಟ ಮಾಡಿ, ಸಾಲ ತೀರಿಸಿ’ ಎಂಬುದಾಗಿ ವಸಂತಾ ಮರಣಪತ್ರ ಬರೆದಿದ್ದಾರೆ. ಅದನ್ನು ಸುಪರ್ದಿಗೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT