ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಮೇಲ್ಸೇತುವೆ ಪುನರ್‌ ವಿನ್ಯಾಸಕ್ಕೆ ಬಿಎಂಆರ್‌ಸಿಎಲ್‌ ಆಕ್ಷೇಪ

Last Updated 7 ಏಪ್ರಿಲ್ 2021, 22:20 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೆಬ್ಬಾಳ ಮೇಲ್ಸೇತುವೆಯನ್ನು ಪುನರ್‌ವಿನ್ಯಾಸಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿತ್ತು. ಆದರೆ, ಈ ವಿನ್ಯಾಸಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.

ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಮಾರ್ಗದಲ್ಲಿ ಮೇಲ್ಸೇತುವೆಗೆ ಹೊಂದುಕೊಂಡಂತೆ ಐದು ಲೇನ್‌ಗಳನ್ನು ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ಐದು ಲೇನ್‌ಗಳನ್ನು ನಿರ್ಮಿಸುವ ರೀತಿಯಲ್ಲಿ ಬಿಡಿಎ ವಿನ್ಯಾಸ ರೂಪಿಸಬೇಕಾಗಿದೆ. ಈ ಪೈಕಿ, ಮೇಲ್ಸೇತುವೆಯ ಎರಡನೇ ಮಟ್ಟದಲ್ಲಿ ಮೆಟ್ರೊ ಮಾರ್ಗ ಬರುವಂತೆ ವಿನ್ಯಾಸ ರೂಪಿಸಬೇಕು ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಈ ಮೊದಲು, ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ದಿಕ್ಕಿನಲ್ಲಿ ಕೇವಲ ಎರಡು ಲೇನ್‌ಗಳ ನಿರ್ಮಾಣ ಕಾಮಗಾರಿಯನ್ನು ಬಿಡಿಎ ಆರಂಭಿಸಿತ್ತು. ಈಗ ಆ ಕಾಮಗಾರಿ ಸ್ಥಗಿತಗೊಂಡಿದೆ.

‘ಬಿಡಿಎ ರೂಪಿಸಿರುವ ವಿನ್ಯಾಸಕ್ಕೆ ಬಿಎಂಆರ್‌ಸಿಎಲ್‌ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಲವು ತಿಂಗಳುಗಳ ಹಿಂದೆಯೇ ಕಾಮಗಾರಿ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣ ಮಾರ್ಗಕ್ಕೆ ಈ ಮೇಲ್ಸೇತುವೆಯಿಂದ ಅಡ್ಡಿ ಉಂಟಾಗುತ್ತದೆ ಎಂಬುದು ನಿಗಮದ ಅಕ್ಷೇಪಕ್ಕೆ ಕಾರಣ. ಮೇಲ್ಸೇತುವೆಯ ಎರಡನೇ ಮಟ್ಟದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಿಸಬೇಕು ಎಂದು ನಿಗಮ ಬಯಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಿತ ಮೇಲ್ಸೇತುವೆಯ ವಿನ್ಯಾಸ ಬದಲಿಸಬೇಕು ಬಿಎಂಆರ್‌ಸಿಎಲ್‌ ಒತ್ತಾಯಿಸುತ್ತಿದೆ’ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಈ ಕುರಿತು ಸರ್ಕಾರ ರಚಿಸಿರುವ ತಾಂತ್ರಿಕ ಸಮಿತಿಯು ಬಿಎಂಆರ್‌ಸಿಎಲ್, ಬಿಡಿಎ, ಸಂಚಾರ ಪೊಲೀಸರು, ಬಿಎಂಟಿಸಿ, ಕೆಆರ್‌ಡಿಸಿಎಲ್‌ ಹಾಗೂ ಲೋಕೋಪಯೋಗಿ ಇಲಾಖೆಯ ಪ್ರತಿನಿಧಿಗಳಿಗೆ ಆರು ತಿಂಗಳ ಹಿಂದೆಯೇ ಈ ಬಗ್ಗೆ ವಿವರವಾಗಿ ಪ್ರಾತ್ಯಕ್ಷಿಕೆ ನೀಡಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಬಿಡಿಎ ರೂಪಿಸಿರುವ ವಿನ್ಯಾಸದಂತೆ ಮೇಲ್ಸೇತುವೆ ನಿರ್ಮಿಸಿದರೆ ಹೊರ ವರ್ತುಲ ರಸ್ತೆ ಮತ್ತು ಪಶ್ಚಿಮ ಮೆಟ್ರೊ ರೈಲು ಸಂಪರ್ಕ ಮಾರ್ಗ ನಿರ್ಮಿಸಲು ಸಾಧ್ಯವಾಗುವುದೇ ಇಲ್ಲ. ಈ ಸಂಬಂಧ ನೇಮಿಸಲಾಗಿದ್ದ ‘ರೈಟ್ಸ್‌’ ಕನ್ಸಲ್ಟಂಟ್ ಕಂಪನಿಯು ಕರಡು ವರದಿಯನ್ನು ಸಲ್ಲಿಸಿದೆ. ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿನ್ಯಾಸಕ್ಕೆ ಆಕ್ಷೇಪಿಸಿರುವುದು ಕೇವಲ ನಿಗಮದ ನಿರ್ಧಾರವಲ್ಲ. ಸರ್ಕಾರದ ಮಟ್ಟದಲ್ಲಿಯೇ ಈ ಬಗ್ಗೆ ನಿರ್ಧಾರವಾಗಿದೆ. ಮೇಲ್ಸೇತುವೆಯ ಸಾಮರ್ಥ್ಯ, ಮೆಟ್ರೊ ಮಾರ್ಗ, ಉಪನಗರ ರೈಲು ಮತ್ತು ಬಿಎಂಟಿಸಿ ಬಸ್‌ ಸೇರಿದಂತೆ ಬಹುಮಾದರಿ ಸಾರಿಗೆ ವ್ಯವಸ್ಥೆ ರೂಪಿಸುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸುವಂತೆ ನಿಗಮಕ್ಕೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ಬಿಡಿಎ ರೂಪಿಸಿರುವ ವಿನ್ಯಾಸವು ಒಂದು ಸಮಸ್ಯೆಗೆ ಮಾತ್ರ ಪರಿಹಾರ ಒದಗಿಸುವಂತಿದೆ. ಈ ನಿಟ್ಟಿನಲ್ಲಿ ವಿನ್ಯಾಸ ಬದಲಾವಣೆಗೆ ಸರ್ಕಾರವೇ ತೀರ್ಮಾನಿಸಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT