ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ನೇಮಕ ಪ್ರಕ್ರಿಯೆ ರದ್ದು

ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ 174 ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು
Last Updated 30 ಅಕ್ಟೋಬರ್ 2020, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನಡೆಸುತ್ತಿದ್ದ ನೇಮಕಾತಿ ಪ್ರಕ್ರಿಯೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಶುಕ್ರವಾರ ರದ್ದುಗೊಳಿಸಿದೆ.

ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ 174 ವಿವಿಧ ಹುದ್ದೆಗಳ ನೇಮಕಾತಿಗೆ 2019ರ ಜನವರಿಯಲ್ಲಿ ನಿಗಮವು ಅರ್ಜಿ ಆಹ್ವಾನಿಸಿತ್ತು.

ಆಡಳಿತಾತ್ಮಕ ಕಾರಣಗಳಿಂದ ಈ ಪ್ರಕ್ರಿಯೆಯನ್ನು ರದ್ದುಪಡಿಸಲಾಗುತ್ತಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಶುಲ್ಕ ಹಿಂದಿರುಗಿಸಲಾಗುವುದು. ನಿಗಮದ ವೆಬ್‌ಸೈಟ್‌ www.bmrc.co.in/career ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಬೇಕು ಹಾಗೂ ಬ್ಯಾಂಕ್ ಖಾತೆ ವಿವರವನ್ನು ದಾಖಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹುದ್ದೆಗಳ ನೇಮಕಾತಿಗೆ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು.ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ ಈ ಪರೀಕ್ಷೆಯನ್ನು ಸುಮಾರು 40 ಸಾವಿರ ಅಭ್ಯರ್ಥಿಗಳು ಬರೆದಿದ್ದರು. ತದನಂತರ 2019ರ ಮೇನಲ್ಲಿ ಅಂಕಗಳ ಪಟ್ಟಿ ಕೂಡ ಬಿಡುಗಡೆ ಮಾಡಿತ್ತು. ನಂತರ ಪ್ರಕ್ರಿಯೆ ಮುಂದುವರಿದಿರಲಿಲ್ಲ. ಈ ಮಧ್ಯೆ ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಜಾರಿ ಮಾಡಲಾಯಿತು. ಈಗ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ನೇಮಕ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಅಭ್ಯರ್ಥಿಗಳು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೊರೆಹೋಗಿದ್ದರು. ಅದಕ್ಕೆ ಸ್ಪಂದಿಸಿದ್ದ ಸಚಿವಾಲಯವು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ಹಲವು ಬಾರಿಗೆ ಸೂಚನೆ ನೀಡಿತ್ತು. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ‘ತಕ್ಷಣ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಬೇಕು‘ ಎಂದು ನಿಗಮಕ್ಕೆ ಪತ್ರ ಬರೆದಿದ್ದರು.

‘ಒಂದೂವರೆ ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ. ಬೇರೆ ಕೆಲಸಗಳನ್ನು ಬಿಟ್ಟು, ಹಗಲು-ರಾತ್ರಿ ಓದಿ ಪರೀಕ್ಷೆ ಬರೆದಿದ್ದೆವು. ನಿಗಮದ ಈ ನಿರ್ಧಾರದಿಂದ ಆಘಾತವಾಗಿದೆ. ನಿಗಮದ ನಿರ್ಧಾರ ವಿರೋಧಿಸಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT