ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಎಲೆಕ್ಟ್ರಿಕ್ ಬಸ್: ವಿನ್ಯಾಸಕ್ಕೆ ಒಪ್ಪಿಗೆ

12 ಮೀಟರ್ ಉದ್ದದ 100 ಎಲೆಕ್ಟ್ರಿಕ್ ಬಸ್ ಆಗಸ್ಟ್‌ನಲ್ಲಿ ರಸ್ತೆಗೆ; ಅಕ್ಟೋಬರ್ ವೇಳೆಗೆ 300 ಬಸ್
Last Updated 8 ಜುಲೈ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: 90 ಎಲೆಕ್ಟ್ರಿಕ್ ಮಿನಿ ಬಸ್‌ಗಳ ಸಂಚಾರ ಯಶಸ್ವಿಯಾದ ಬೆನ್ನಲ್ಲೇ 12 ಮೀಟರ್ ಉದ್ದದ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಜ್ಜಾಗಿದೆ.

ಅಶೋಕ್ ಲೈಲ್ಯಾಂಡ್ ಕಂಪನಿ ಈ ಬಸ್‌ಗಳನ್ನು ಬಿಎಂಟಿಸಿಗೆ ಪೂರೈಸುತ್ತಿದೆ.ಚಾಲಕರನ್ನು ಕಂಪನಿಯವರೇ ಒದಗಿಸ
ಲಿದ್ದು, ನಿರ್ವಾಹಕರಾಗಿ ಬಿಎಂಟಿಸಿ ನೌಕರರೇ ಇರಲಿದ್ದಾರೆ.

ಬಸ್‌ನ ವಿನ್ಯಾಸ ಮತ್ತು ಸ್ಟಿಕ್ಕರ್ ಅಳವಡಿಕೆ ಪರಿಶೀಲನೆ ನಡೆಸಲು ಶುಕ್ರವಾರ ಬಿಎಂಟಿಸಿ ಕೇಂದ್ರ ಕಚೇರಿ ಬಳಿಗೆ ಬಸ್‌ ಒಂದನ್ನು ತರಿಸಲಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದ್ದು, ಇದೇ ಮಾದರಿಯ 100 ಬಸ್‌ಗಳು ಮುಂದಿನ ತಿಂಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಬಸ್‌ನ ನಾಲ್ಕು ಬದಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎರಡು ಬಾಗಿಲು ಮತ್ತು 40 ಆಸನಗಳನ್ನು ಬಸ್‌ ಒಳಗೊಂಡಿದೆ.

‘ವಿನ್ಯಾಸ ಒಪ್ಪಿಗೆ ಆಗಿರುವುದರಿಂದ ಆಗಸ್ಟ್ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಆಲೋಚನೆ ನಡೆಸಲಾಗಿದೆ. ಅಕ್ಟೋಬರ್ ವೇಳೆಗೆ 12 ಮೀಟರ್ ಉದ್ದದ 300 ಬಸ್‌ಗಳು ನಗರದಲ್ಲಿ ಸಂಚರಿಸಲಿವೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳನ್ನು ಕಂಪನಿಯೇ ಸಿದ್ಧಪಡಿಸಿಕೊಳ್ಳಲಿದೆ. ಮೂರು ಡಿಪೊ ಮತ್ತು ನಾಲ್ಕು ನಿಲ್ದಾಣಗಳಲ್ಲಿ ಜಾಗ ಗುರುತಿಸಲಾಗಿದೆ. ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಕಂಪನಿಯೇ ನಿಭಾಯಿಸಲಿದ್ದು, ಕಿಲೋ ಮೀಟರ್‌ಗೆ ದರ ನಿಗದಿ ಮಾಡಿ ಅದನ್ನು ಬಿಎಂಟಿಸಿ ಭರಿಸಲಿದೆ. ಪರಿಸರಸ್ನೇಹಿ, ಅಂಗವಿಕಲಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ’ ಎಂದರು.

ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2019ರ ಸೆಪ್ಟೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಫೇಮ್ ಇಂಡಿಯಾ ಯೋಜನೆಯಡಿ ಮೆಟ್ರೊ ಫೀಡರ್ ಸೇವೆಗೆ 90 ಎಲೆಕ್ಟ್ರಿಕ್‌ ಮಿನಿ ಬಸ್‌ಗಳ ಪಡೆಯಲು 2020ರ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಜೆಬಿಎಂ ಕಂಪನಿ ಗುತ್ತಿಗೆ ಪಡೆದು ಈಗಾಗಲೇ 90 ಬಸ್‌ಗಳನ್ನು ಪೂರೈಸಿದ್ದು, ಈ ಬಸ್‌ಗಳು ನಗರದಲ್ಲಿ ಸಂಚರಿಸುತ್ತಿವೆ.

300 ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾದರೆ, ಒಟ್ಟು 390 ಎಲೆಕ್ಟ್ರಿಕ್ ಬಸ್‌ಗಳನ್ನು ಸಂಸ್ಥೆ ಹೊಂದಿದಂತಾಗಲಿದೆ. ಈ ಬಸ್‌ಗಳಿಗೆ ಚಾಲಕರನ್ನು ಕಂಪನಿಗಳೇ ಒದಗಿಸುವುದರಿಂದ ಅಷ್ಟು ಮಂದಿಯ ಉದ್ಯೋಗ ಖಾಸಗಿ ಪಾಲಾದಂತೆ ಆಗಿದೆ ಎಂಬ ಆಕ್ಷೇಪಗಳು ನೌಕರರ ವಲಯದಿಂದ ವ್ಯಕ್ತವಾಗಿವೆ.

ಇನ್ನೂ 1,500 ಎಲೆಕ್ಟ್ರಿಕ್ ಬಸ್

‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ-ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

‘ಈ ಯೋಜನೆಯಡಿ 1,500 ಬಸ್‌ಗಳನ್ನು ಪಡೆದುಕೊಳ್ಳಲು ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಪ್ರಸ್ತಾವನೆ ಈಗ ರಾಜ್ಯ ಸರ್ಕಾರದ ಮುಂದಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT