ಬುಧವಾರ, ಏಪ್ರಿಲ್ 21, 2021
32 °C
ಬೊಮ್ಮನಹಳ್ಳಿ ವಲಯ

ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕ್ರಮ: 16 ವಾರ್ಡುಗಳಲ್ಲಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಬಿಬಿಎಂಪಿ ಅಧಿಕಾರಿಗಳು ಬೊಮ್ಮನಹಳ್ಳಿ ವಲಯದ 16 ವಾರ್ಡುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡುವ ಕಾರ್ಯವನ್ನು ಮಂಗಳವಾರ ನಡೆಸಿದರು.

ಬೊಮ್ಮನಹಳ್ಳಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗು ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳಿದ್ದ ಅಂಗಡಿಗಳಿಗೆ ದಾಳಿ ನಡೆಸಿ ವಶಕ್ಕೆ ಪಡೆಯುವ ಜತೆಗೆ ಸ್ಥಳದಲ್ಲೇ ₹22 ಸಾವಿರ ದಂಡವನ್ನೂ ವಿಧಿಸಿದರು. ಕೆಲ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಪಿಜಿ ಕಟ್ಟಡದಲ್ಲಿ ಕೊಳೆತ ಆಹಾರ: ಪಿಜಿ ಕಟ್ಟಡವೊಂದರಲ್ಲಿ ಕೊಳೆತ ಆಹಾರವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಡಲಾಗಿತ್ತು. ಊಟದ ಹಾಲ್‌ನಲ್ಲೇ ಇಡಲಾಗಿದ್ದ ಚೀಲಗಳಿಂದ ಗಬ್ಬು ವಾಸನೆ ಬೀರುತ್ತಿದ್ದರೂ, ಅದನ್ನು ವಿಲೇವಾರಿ ಮಾಡಿರಲಿಲ್ಲ. ಕಾರಣ ಕೇಳಿದ್ದಕ್ಕೆ ಪಿಜಿ ಕಟ್ಟಡದ ಮಾಲೀಕರಿಂದ ಮೌನವೇ ಉತ್ತರವಾಗಿತ್ತು. ಇದರಿಂದ ಕುಪಿತಗೊಂಡ ಪಾಲಿಕೆಯ ಜಂಟಿ ಆಯುಕ್ತೆ ಸೌಜನ್ಯಾ ₹10 ಸಾವಿರ ದಂಡ ವಿಧಿಸಿದರು.

ತಳ್ಳು ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಪೇಪರ್ ಚೀಲ ಬಳಸುತ್ತಿದ್ದುದನ್ನು ಕಂಡು ಶಾಸಕ ಸತೀಶ್ ರೆಡ್ಡಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.

‘ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಯಶಸ್ವಿಯಾಗಿದೆ. ನಮ್ಮಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಾಲಿಕೆಯ ಜತೆ ಸಹಕರಿಸುತ್ತಿಲ್ಲ. ಎಚ್ಚರಿಕೆಯ ನಂತರವೂ ಪ್ಲಾಸ್ಟಿಕ್ ಬಳಸಿದ್ದಲ್ಲಿ ₹2.5 ಲಕ್ಷವರೆಗೆ ದಂಡ ವಿಧಿಸಲು ಅವಕಾಶವಿದ್ದು, ಅದನ್ನು ಪಾಲಿಸಬೇಕಾಗುತ್ತದೆ. ಜತೆಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕಗಳ ಮೇಲೂ ದಾಳಿ ನಡೆಸುತ್ತೇವೆ’ ಎಂದು ಸೌಜನ್ಯಾ ತಿಳಿಸಿದರು.

‘ಮೂರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಸತೀಶ್ ರೆಡ್ಡಿ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು