ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪಮಾತ್ರಕ್ಕೆ ತೆರವು ಕಾರ್ಯಾಚರಣೆ!

ಹುಳಿಮಾವು ಕೆರೆ ಒತ್ತುವರಿ; ತಡೆಯಾಜ್ಞೆ ತಂದ ಮನೆ ಮಾಲೀಕರು
Last Updated 2 ಜನವರಿ 2020, 23:34 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಹುಳಿಮಾವು ಕೆರೆಯ ಒತ್ತುವರಿ ತೆರವಿಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿದರು. ಒತ್ತುವರಿ ತೆರವು ಕಾರ್ಯವು ಸಣ್ಣ ಜಾಗವನ್ನೂ ವಶಕ್ಕೆ ಪಡೆಯಲಾಗದೆ ಅಣಕು ಪ್ರದರ್ಶನದಂತೆ ಮುಕ್ತಾಯವಾಯಿತು ಎಂದು ಸ್ಥಳೀಯರು ವ್ಯಂಗ್ಯವಾಡಿದರು.

ಹುಳಿಮಾವು ಕೆರೆ ದಂಡೆ ಒಡೆದು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯ ಹಮ್ಮಿಕೊಳ್ಳಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹೀಗಿದ್ದೂ ನಿವಾಸಿಗಳಿಂದ ವಿರೋಧ ಎದುರಿಸಬೇಕಾಯಿತು. ಹೀಗಾಗಿ, ಯಾವುದೇ ಆಸ್ತಿ ವಶಕ್ಕೆ ಪಡೆಯಲಾಗದೇ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದೇ ವಾಪಸಾಗಬೇಕಾಯಿತು. ಕೆರೆಯ ದಕ್ಷಿಣ ಭಾಗಕ್ಕೆ ಇರುವ ತೇಜಸ್ವಿನಿ ನಗರದ ಶ್ರೀಕೃಷ್ಣ ಪಾರ್ಕ್ ಬಳಿ ಒತ್ತುವರಿಯಾಗಿರುವ 15 ಎಕರೆಯನ್ನು ವಶಕ್ಕೆ ಪಡೆಯುವ ಉದ್ದೇಶವಿತ್ತು. ಇಲ್ಲಿನ ಎರಡು ಖಾಲಿ ಮನೆಗಳನ್ನು ಜೆಸಿಬಿ ಮೂಲಕ ಕೆಡವುತ್ತಿದ್ದಂತೆ, ನಿವಾಸಿಯೊಬ್ಬರು ನ್ಯಾಯಾಲಯದ ತಡೆಯಾಜ್ಞೆ ಪ್ರತಿಯನ್ನು ತಹಶೀಲ್ದಾರ್‌ಗೆ ನೀಡಿದರು.

2016ರಲ್ಲಿ ಕೆರೆ ಒತ್ತುವರಿ ಆಗಿರುವ ಜಾಗವನ್ನು ಗುರುತು ಮಾಡಿ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿತ್ತು. ಈ ಜಾಗದಲ್ಲಿ ವಾಸದ ಮನೆಗಳನ್ನು ಕಟ್ಟಿಕೊಂಡಿರುವವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು ಎನ್ನಲಾಗಿದೆ.

ಮನೆ ಕೆಡವಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮನೆ ಮಾಲೀಕ ನಾಗರಾಜ್ ‘ದನಕರುಗಳಿಗಾಗಿ ಇದ್ದ ಮನೆಯನ್ನು ಅನ್ಯಾಯವಾಗಿ ಕೆಡವಿದರು. ಸಂಜೆವರೆಗೆ ಸಮಯ ಕೊಡಿ ಎಂದು ಅಂಗಲಾಚಿದರೂ ಅಧಿಕಾರಿಗಳು ಕೇಳಲಿಲ್ಲ. ಆದರೆ, ಅದೇ ಶ್ರೀಮಂತರು ಕೇಳಿದಾಕ್ಷಣ ಸಮಯ ನೀಡಿದ್ದಾರೆ. ಇದ್ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಇಬ್ಬರು ಅಂಗವಿಕಲ ಮಕ್ಕಳೊಂದಿಗೆ ಕೂಲಿ ಮಾಡುತ್ತಾ ಈ ಜೋಪಡಿಗಳಲ್ಲೇ 20 ವರ್ಷ ಕಳೆದಿದ್ದೇವೆ. ಈಗ ಏಕಾಏಕಿ ಮನೆ ಕೆಡವಿದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಕೃಷ್ಣಮ್ಮ ಅಳಲು ತೋಡಿಕೊಂಡರು.

ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಬಂದ ಶಾಸಕ ಎಂ.ಕೃಷ್ಣಪ್ಪ, ‘ಒತ್ತುವರಿಯಾಗಿದೆ ಎಂದು ಹೇಳಲಾಗುವ ಕೆರೆ ಜಾಗದಲ್ಲಿ ಶ್ರೀಕೃಷ್ಣ ಪಾರ್ಕ್ ಅನ್ನು ಬಿಬಿಎಂಪಿಯೇ ಅಭಿವೃದ್ಧಿಪಡಿಸಿದೆ ಹಾಗೂ ಸುತ್ತಲಿನ ಮನೆಗಳಿಗೆ ನಕ್ಷೆ ಮಂಜೂರು ಮಾಡಿದೆ. ಹೀಗಾಗಿ ಈ ಬಗ್ಗೆ ಆಯುಕ್ತರು ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಐಷಾರಾಮಿ ಸಮುಚ್ಚಯಗಳ ಮುಂದೆ ಜೋಪಡಿಗಳು ಇರಬಾರದು ಎಂಬ ಕಾರಣಕ್ಕೆ ಈ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಾಗಿ, ಅವರ ಉದ್ದೇಶ ಕೆರೆ ಸಂರಕ್ಷಣೆ ಅಲ್ಲ. ಬದಲಾಗಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವುದೇ ಆಗಿದೆ’ ಎಂದು ಸ್ಥಳೀಯ ನಿವಾಸಿ ಗೋಪಾಲ್ ದೂರಿದರು.

‘ತೇಜಸ್ವಿನಿ ಬಡಾವಣೆಯ ಎಂಟು ಮನೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಹಾಗೂ ಉಳಿದವರಿಗೆ ಗಡುವು ನೀಡಿದ್ದೇವೆ. ಗಡುವು ಮುಗಿಯುತ್ತಿದ್ದಂತೆ ಮತ್ತೆ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದು ತಹಶೀಲ್ದಾರ್ ಶಿವಪ್ಪ ಲಮಾಣಿ ಹೇಳಿದರು.

ಈ ವೇಳೆ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಟಿ.ಮೋಹನ್‌ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT