ಮಂಗಳವಾರ, ಮಾರ್ಚ್ 21, 2023
20 °C
ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ

ಗೋಮಾಳ ಅತಿಕ್ರಮಣ: ವರದಿ ನೀಡಲು ಹೈಕೋರ್ಟ್ ಸೂಚನೆ

ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮದಲ್ಲಿ 78 ಎಕರೆ 5 ಗುಂಟೆ ಗೋಮಾಳ ಜಮೀನು ಭೂಗಳ್ಳರ ಪಾಲಾಗುತ್ತಿದ್ದು, ಈ ಬಗ್ಗೆ 15 ದಿನಗಳ ಒಳಗಾಗಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಎಂ.ಬಾಬು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗರತ್ನ ಹಾಗೂ ಹಂಚತೆ ಸಂಜೀವ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿತು.

‘ಈ ಜಮೀನಿನಲ್ಲಿ ನಿವೇಶನ ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಅಮಾಯಕರು ನಿವೇಶನ ಖರೀದಿಸಿ, ಮೋಸ ಹೋಗುತ್ತಿದ್ದಾರೆ. ಜಮೀನು ಅತಿಕ್ರಮಣ ಆಗದಂತೆ ಬಂದೋಬಸ್ತ್ ಮಾಡುವಂತೆ ಹಾಗೂ ಇದನ್ನು ಸಸ್ಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಆದೇಶಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು’.

‘ಅರಣ್ಯ ಇಲಾಖೆ ಕ್ರಮ ಕೈಗೊಳ್ಳದ ಕಾರಣ, ಸುಮಾರು ₹600 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಭೂಗಳ್ಳರು ಕಬಳಿಸುತ್ತಿದ್ದಾರೆ, ಇದನ್ನು ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಎಂ.ಬಾಬು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಕಂದಾಯ ದಾಖಲೆಗಳಾದ ಪ್ರಕಾರ ಈ ಜಾಗ ಗೋಮಾಳ ಎಂದು ಸ್ಪಷ್ಟಪಡಿಸಲಾಗಿದೆ. ಎಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ಸಂಚಾಲಕರು ಎನ್ನಲಾಗಿರುವ ಎಂ.ವಿ.ರಾಜಯ್ಯ ಅವರು ಈ ಗೋಮಾಳ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ, ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆ ಹಿಡಿಯಬೇಕೆಂದು 1995ರಲ್ಲೇ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆನೇಕಲ್ ತಾಲ್ಲೂಕಿನ ಅಂದಿನ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು’.

‘ಬಳಿಕ ಸ್ಥಳ ಪರಿಶೀಲನೆ ನಡೆದು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಒತ್ತುವರಿ ಆಗಿರುವುದು, ಅಕ್ರಮವಾಗಿ ನಿವೇಶನ ಮಾಡಿರುವ ಕುರಿತು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಬಳಿಕ ಸದರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಸ್ಥಳಕ್ಕೆ ಯಾವುದೇ ರಕ್ಷಣೆ ಇಲ್ಲದಿದ್ದರಿಂದ ಜಾಗ ಅತಿಕ್ರಮಣ ಆಗುತ್ತಲೇ ಇದೆ’ ಎಂದು ಎಂ.ಬಾಬು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು