ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಜಾಥಾಗೆ ಅಡ್ಡಿಪಡಿಸಿದ ಪೊಲೀಸರು

ಮುಖಂಡರನ್ನು ಎಳೆದಾಡಿದ್ದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣ
Last Updated 22 ಜನವರಿ 2021, 19:13 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಇಲ್ಲಿನ ಗಾರ್ವೆಬಾವಿಪಾಳ್ಯದಲ್ಲಿ ಶುಕ್ರವಾರ ಆರಂಭವಾದ ರೈತ ಜನ ಜಾಗೃತಿ ಜಾಥಾಗೆ ಅಡ್ಡಿಪಡಿಸಿದ ಪೊಲೀಸರು, ಮುಖಂಡರನ್ನು ಎಳೆದಾಡಿದ್ದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ಜಾಥಾ ನಡೆಸಲು ಅನುಮತಿ ಪಡೆದಿರಲಿಲ್ಲ. ಹೀಗಾಗಿ ಜಾಥಾ ತಡೆದಿದ್ದೇವೆ ಎಂದು ಸಬ್ ಇನ್‌ಸ್ಪೆಕ್ಟರ್‌ ಈಶ್ವರ್ ಹೇಳಿದ್ದಾರೆ.

‘ಜಾಥಾ ನಡೆಸಲು ಆಗ್ನೇಯ ವಿಭಾಗದ ಡಿಸಿಪಿ ಅವರಿಗೆ ಜನವರಿ 13ರಂದೇ ಅನುಮತಿಗಾಗಿ ಕೋರ ಲಾಗಿತ್ತು. ಆದರೆ, ಅನುಮತಿಯನ್ನೂ ನೀಡದೇ ಮತ್ತು ಹಿಂಬರಹವನ್ನೂ ನೀಡದೇ ಸತಾಯಿಸಿದ್ದಾರೆ’ ಎಂದು ಸಿಪಿಐ (ಎಂ) ಮುಖಂಡ ಕೆ.ಪ್ರಕಾಶ್ ಆರೋಪಿಸಿದರು.

ರೈತ ಮುಖಂಡ ತೊರೆಶೆಟ್ಟಹಳ್ಳಿ ಯಶವಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ತಡೆದ ಪೊಲೀಸರು ಮುಖಂಡರನ್ನು ಬಂಧಿಸಲು ಯತ್ನಿಸಿದರು. ಇದಕ್ಕೆ ಪ್ರತಿರೋಧ ತೋರಿದ ಕಾರ್ಯಕರ್ತರು ಮುಖಂಡರ ಬಂಧನ ವಿರುದ್ಧ ಘೋಷಣೆ ಕೂಗಿದರು. ಮೇಲಧಿಕಾರಿಗಳ ಸೂಚನೆಯಂತೆ ಮುಖಂಡರ ಬಂಧನ ಕೈಬಿಟ್ಟರು.

’ದೇಶದೆಲ್ಲೆಡೆ ಬೆಳೆದು ಬರುತ್ತಿರುವ ರೈತರ ಪ್ರತಿರೋಧವನ್ನು ಪೊಲೀಸರ ಬಲಪ್ರಯೋಗ ಮೂಲಕ ಹತ್ತಿಕ್ಕಲು ಪ್ರಯತ್ನಿಸಿದ್ದಲ್ಲಿ, ರೈತರ ಕಿಚ್ಚು ಇನ್ನಷ್ಟು ಹೆಚ್ಚಾಗಲಿದೆ‘ ಎಂದು ತೊರೆಶೆಟ್ಟಹಳ್ಳಿ ಯಶವಂತ್ ಆಕ್ರೋಶ ವ್ಯಕ್ತಪಡಿಸಿದರು.

‘ತ್ರಿವಳಿ ಕೃಷಿ ಕಾಯ್ದೆಗಳು ದೇಶದ ರೈತಾಪಿ ಕೃಷಿಯನ್ನು ನಾಶ ಮಾಡಿ ಕಂಪನಿ ಕೃಷಿಗೆ ಅವಕಾಶ ಮಾಡಿಕೊಡಲಿದ್ದು, ಇದರಿಂದ ಆಹಾರ ಅಭದ್ರತೆ, ನಿರುದ್ಯೋಗ ಹೆಚ್ಚಲಿದ್ದು, ಗ್ರಾಮೀಣ ಆರ್ಥಿಕತೆ ಸಂಪೂರ್ಣ ನಾಶವಾಗಲಿದೆ. ಜನವರಿ 26 ರಂದು ಜನರ ಗಣರಾಜ್ಯೋತ್ಸವ ಆಚರಣೆಯಲ್ಲಿ ಲಕ್ಷಾಂತರ ರೈತರು, ಕಾರ್ಮಿಕರು ಭಾಗವಹಿಸಲಿದ್ದಾರೆ‘ ಎಂದರು.

ಕೆ.ಪ್ರಕಾಶ್ ಮಾತನಾಡಿ, ’ಕೃಷಿ ಕಾಯ್ದೆಗಳ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಈ ಕಾಯ್ದೆಗಳ ನಿಜ ಹೂರಣವನ್ನು ಜನತೆ ಅರ್ಥ ಮಾಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಜನ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT