ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ ಮಾಡಿ ಜೈಲು ಸೇರಿದ ರೇವಣ್ಣ: ಎಲ್.ಎನ್. ಮುಕುಂದರಾಜ್

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಮುಕುಂದರಾಜ್ ಹೇಳಿಕೆ
Published 12 ಮೇ 2024, 16:02 IST
Last Updated 12 ಮೇ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಯಜ್ಞ–ಯಾಗ, ಹೋಮಗಳಿಂದ ಹೊರಹೊಮ್ಮುವ ಹೊಗೆಯು ವ್ಯಕ್ತಿಯನ್ನು ಕಳಂಕಿತನಾಗಿಸುತ್ತದೆ. ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಬಹಳ ದೊಡ್ಡ ಹೋಮ ಮಾಡಿಸಿ, ಪರಪ್ಪನ ಅಗ್ರಹಾರ ಸೇರಿದರು. ಹೋಮ ಫಲ ಯಾವ ರೀತಿ ಇರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು. 

ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಸಂಸ್ಥೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾ.ನಾ. ರಮೇಶ ಅವರ ‘ನನಸುಗಾರನ ಸ್ವಗತ–ಸಾಗಿ ಸರಿದ ಬದುಕಿನ ಸ್ಮರಣೆಗಳು’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. 

‘ಹೋಮದ ಹೊಗೆಯಿಂದ ಕಪ್ಪಾಗುತ್ತಾರೆ ಎಂದು ಯಜ್ಞ ಫಲದ ಬಗ್ಗೆ ಸಾವಿರ ವರ್ಷಗಳ ಹಿಂದೆಯೇ ಪಂಪ ಹೇಳಿದ್ದ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ನಿವಾಸದ ಜತೆಗೆ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿಯಲ್ಲಿಯೂ ಶತ್ರು ಸಂಹಾರ ಸೇರಿ ವಿವಿಧ ಹೋಮಗಳನ್ನು ಮಾಡಿಸಿದ್ದರು. ಇದರ ಕಾರಣವಾಗಿಯೇ ಅವರು ಸಂಕಷ್ಟಕ್ಕೆ ಸಿಲುಕಿ, ಬಹಳ ಬೆಲೆ ಬಾಳುವ ಕಚೇರಿಯ ಜಾಗವನ್ನೂ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಅನ್ವಯ ಕಾಂಗ್ರೆಸ್‌ ಪಕ್ಷಕ್ಕೆ ನೀಡಬೇಕಾಯಿತು ಅನಿಸುತ್ತದೆ. ಯಡಿಯೂರಪ್ಪ ಅವರೂ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹೋಮ ಮಾಡಿಸಿದ್ದರು. ಅದರ ಫಲವಾಗಿ ಅವರು ಪರಪ್ಪನ ಅಗ್ರಹಾರ ಸೇರಬೇಕಾಯಿತು. ಹೋಮ, ಯಜ್ಞ ಮಾಡುವುದರಿಂದ ಬಹಳ ಅನಾಹುತಗಳಾಗುತ್ತವೆ’ ಎಂದು ಹೇಳಿದರು. 

‘ರಾಮಾಯಣವು ಯಜ್ಞ ಸಂಘರ್ಷದಿಂದ ಕೂಡಿದೆ. ಯಜ್ಞದಿಂದ ಉಂಟಾಗುವ ಕಳಂಕಗಳ ಬಗ್ಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಇಷ್ಟಾಗಿಯೂ ಪುರೋಹಿತರ ಮಾತನ್ನು ಕೇಳಿ ಗೃಹಪ್ರವೇಶ ಸೇರಿ ವಿವಿಧ ಸಂದರ್ಭದಲ್ಲಿ ಯಜ್ಞ ಮಾಡಿಸಲಾಗುತ್ತದೆ’ ಎಂದು ತಿಳಿಸಿದರು. 

ಕೃತಿಯ ಬಗ್ಗೆ ರಂಗಕರ್ಮಿ ಯೋಗೇಶ್ ಮಾಸ್ಟರ್ ಮಾತನಾಡಿ ಮೆಚ್ಚುಗೆ ವ್ಯಕ್ತಪ‍ಡಿಸಿದರು. ಲೇಖಕಿ ಡಾ. ವಸುಂಧರಾ ಭೂಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುಸ್ತಕ ಪರಿಚಯ  ಪುಸ್ತಕ: ‘ನನಸುಗಾರನ ಸ್ವಗತ–ಸಾಗಿ ಸರಿದ ಬದುಕಿನ ಸ್ಮರಣೆಗಳು’ ಪ್ರಕಾರ: ಆತ್ಮಕಥೆ ಲೇಖಕರು: ಸಾ.ನಾ. ರಮೇಶ ಪುಟಗಳು: 300 ಬೆಲೆ: ₹ 350 ಪ್ರಕಾಶನ: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT