ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.75 ಲಕ್ಷ ಲಂಚ: ಅನುದಾನಿತ ಪಾಲಿಟೆಕ್ನಿಕ್‌ ಎಫ್‌ಡಿಎಗೆ ನಾಲ್ಕು ವರ್ಷ ಜೈಲು

Last Updated 24 ಫೆಬ್ರುವರಿ 2023, 16:36 IST
ಅಕ್ಷರ ಗಾತ್ರ

ಬೆಂಗಳೂರು: ಅನಧಿಕೃತ ಗೈರು ಹಾಜರಿಯ ಕಾರಣದಿಂದ ಕ್ರಮಕ್ಕೆ ಗುರಿಯಾಗುತ್ತಿದ್ದ ತನ್ನ ಸಹೋದ್ಯೋಗಿಯಿಂದಲೇ ₹ 2.75 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ನಾಗರಭಾವಿಯ ಪಿವಿಪಿ ಅನುದಾನಿತ ಪಾಲಿಟೆಕ್ನಿಕ್‌ನ ಪ್ರಥಮ ದರ್ಜೆ ಸಹಾಯಕ ಎಚ್‌. ‍ಪ್ರಕಾಶ್‌ ಎಂಬುವವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿದೆ.

ಪಾಂಚಜನ್ಯ ವಿದ್ಯಾಪೀಠ ವೆಲ್ಫೇರ್‌ ಟ್ರಸ್ಟ್‌ ಅಧೀನದ ಪಿವಿಪಿ ಪಾಲಿಟೆಕ್ನಿಕ್‌ನಲ್ಲಿ ಪ್ರಯೋಗಾಲಯ ಸಹಾಯಕರಾಗಿದ್ದ ಎಂ.ಎನ್‌. ಶ್ರೀನಿವಾಸ ದೀರ್ಘ ಕಾಲದಿಂದ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. ಅವರನ್ನು ಕೆಲಸದಿಂದ ವಜಾಗೊಳಿಸಲು ಆಡಳಿತ ಮಂಡಳಿ ಪ್ರಕ್ರಿಯೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸಹೋದ್ಯೋಗಿಯನ್ನು ಸಂಪರ್ಕಿಸಿದ್ದ ಪ್ರಕಾಶ್‌, ₹ 3 ಲಕ್ಷ ಲಂಚ ನೀಡಿದರೆ ಶಿಸ್ತುಕ್ರಮದಿಂದ ಪಾರು ಮಾಡುವುದಾಗಿ ತಿಳಿಸಿದ್ದರು. ₹ 25,000 ಮೊತ್ತವನ್ನು ಮೊದಲ ಕಂತಿನಲ್ಲಿ ಪಡೆದುಕೊಂಡಿದ್ದರು.

₹ 2.75 ಲಕ್ಷ ನೀಡುವಂತೆ ಒತ್ತಾಯಿಸಿದಾಗ ಶ್ರೀನಿವಾಸ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು. 2018ರ ಏಪ್ರಿಲ್‌ 11ರಂದು ಲಂಚ ಪಡೆಯುತ್ತಿದ್ದಾಗ ಪ್ರಕಾಶ್‌ ಅವರನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಫೆಬ್ರುವರಿ 10ರಂದು ಆದೇಶ ಪ್ರಕಟಿಸಿರುವ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ‘ಪ್ರಕಾಶ್‌ ಅಪರಾಧಿ’ ಎಂದು ಸಾರಿದ್ದಾರೆ. ನಾಲ್ಕು ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿದ್ದಾರೆ. ದಂಡ ಪಾವತಿಗೆ ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ.

ಎಸಿಬಿ ಅಧಿಕಾರಿಗಳು ಬಂಧಿಸಿದ ಬಳಿಕ ಪ್ರಕಾಶ್‌, ಎರಡು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಆ ಅವಧಿಯನ್ನು ಶಿಕ್ಷೆಯ ಪ್ರಮಾಣದಿಂದ ಕಡಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT