ಸೋಮವಾರ, ಜೂನ್ 21, 2021
23 °C

‘ಚುನಾವಣಾ ವೆಚ್ಚಕ್ಕೆ ಸಾರ್ವಜನಿಕ ನಿಧಿ ಸ್ಥಾಪನೆಯಾಗಲಿ’-ಪ್ರೊ.ಎಂ.ವಿ.ರಾಜೀವ್ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ ಸ್ವಚ್ಛ ರಾಜಕೀಯ ವ್ಯವಸ್ಥೆ ಸ್ಥಾಪಿಸಲು ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಚುನಾವಣಾ ವೆಚ್ಚಕ್ಕಾಗಿಯೇ ಸಾರ್ವಜನಿಕ ನಿಧಿಯನ್ನು ಸ್ಥಾಪಿಸಬೇಕು. ಅಭ್ಯರ್ಥಿಗಳಿಗೆ ಇದನ್ನು ನೀಡುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಪ್ರೊ. ಎಂ.ವಿ. ರಾಜೀವ್‌ ಗೌಡ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ವತಿಯಿಂದ ‘ಚುನಾವಣಾ ಸುಧಾರಣೆಗಳು’ ಕುರಿತು ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಇಂದಿನ ಚುನಾವಣೆಗಳು ಹಣ, ಮದ್ಯ ಹಾಗೂ ಜಾತಿ ಆಧಾರದ ಮೇಲೆ ನಡೆಯುತ್ತಿವೆ. ಬಂಡವಾಳ ಹೂಡಿ ಗೆದ್ದವರು, ಅಧಿಕಾರವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುವ ಮೂಲಕ ಬಂಡವಾಳಕ್ಕೆ ಲಾಭ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ನಿಧಿ ಸ್ಥಾಪಿಸಿದರೆ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ, ‘ರಾಜಕಾರಣ ಹಣದ ವ್ಯವಹಾರದ ಚಕ್ರವ್ಯೂಹದಲ್ಲಿ ಸಿಲುಕಿದೆ. ಮತ ನೀಡುವವರು ಹಣ ಕೇಳುವ ಕಾರಣದಿಂದ, ರಾಜಕಾರಣಿಗಳು ಹಣ ಮಾಡಲೇಬೇಕಾಗಿದೆ. ವ್ಯಾಪಾರಸ್ಥರು ಇದನ್ನು ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ಕೋಮುವಾದೀಕರಣ, ವಾಣಿಜ್ಯೀಕರಣ ಮತ್ತು ಭ್ರಷ್ಟಾಚಾರ ಇಂದಿನ ರಾಜಕಾರಣದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿವೆ. ಇವುಗಳನ್ನು ತೊಡೆದುಹಾಕುವ ಕಡೆಗೆ ಯುವಜನತೆ ಗಮನಹರಿಸಬೇಕು’ ಎಂದು ತಿಳಿಸಿದರು.

ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು