ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ.ವಿ.ವಿ.: ಸಂವಹನ ಕಲಿಕೆಗೆ ನಾಲ್ಕು ಹೊಸ ಕೋರ್ಸ್‌

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಲಿಕೆ?
Last Updated 22 ಮಾರ್ಚ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬದಲಾದ ಕಾಲಮಾನಕ್ಕೆ ತಕ್ಕಂತೆಪತ್ರಿಕೋದ್ಯಮದಲ್ಲಿ ಆಗಿರುವ ಅಪಾರ ಬದಲಾವಣೆಗಳನ್ನು ಗಮನಿಸಿರುವ ಬೆಂಗಳೂರು ವಿಶ್ವವಿದ್ಯಾಲಯವು ನಾಲ್ಕು ಹೊಸ ಕೋರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ.

ಸದ್ಯ ಇರುವ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ವಿದ್ಯುನ್ಮಾನ ಮಾಧ್ಯಮ ಕೋರ್ಸ್‌ಗಳೊಂದಿಗೆ ಸಿನಿಮಾ ನಿರ್ಮಾಣ, ಅನಿಮೇಷನ್‌ ಆ್ಯಂಡ್‌ ಗ್ರಾಫಿಕ್ಸ್‌, ಕಾರ್ಪೊರೇಟ್‌ ಮತ್ತು ಸಾರ್ವಜನಿಕ ಸಂಪರ್ಕ, ನವಮಾಧ್ಯಮಗಳ ಅಧ್ಯಯನ ಮತ್ತು ನಿರ್ವಹಣೆ ಎಂಬ ಹೊಸ ವಿಭಾಗಗಳನ್ನು ತೆರೆಯಲು ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯ ತಳೆದಿದೆ. ಈ ಆರು ಕೋರ್ಸ್‌ಗಳನ್ನು ಸೇರಿಸಿ ‘ಫ್ಯಾಕಲ್ಟಿ ಆಫ್‌ ಕಮ್ಯೂನಿಕೇಷನ್‌’ ರೂಪಿಸಲು ಯೋಜಿಸಲಾಗಿದೆ.

ಈ ನವೀನ ಯೋಜನೆಯನ್ನು ಕಾರ್ಯಗತ ಮಾಡುವ ತಯಾರಿಗಳು ಇನ್ನಷ್ಟೆ ಶುರು ಆಗಬೇಕಿದೆ. ಇವುಗಳಿಗೆ ಕಾಯಂ ಬೋಧಕರ ನೇಮಕಾತಿ ಆಗುವ ವರೆಗೂ ಪರಿಣಿತರನ್ನೇ ಅತಿಥಿ ಬೋಧಕರಾಗಿ ಬಳಸಿಕೊಳ್ಳಲು ಯೋಚಿಸಲಾಗಿದೆ.

ಸಿನಿಮಾ ನಿರ್ಮಾಣ ಕೋರ್ಸ್‌ಗಾಗಿ ಸ್ಟುಡಿಯೋ ಒಂದರ ಜತೆ ಒಪ್ಪಂದ ಮಾಡಿಕೊಳ್ಳಲು, ಅನಿಮೇಷನ್‌ ಮತ್ತು ಗ್ರಾಫಿಕ್ಸ್‌ಗಾಗಿ ತಂತ್ರಾಂಶಗಳನ್ನು ಖರೀದಿಸಲು ಚಿಂತನೆ ನಡೆದಿದೆ. ಈ ಎರಡು ಕೋರ್ಸ್‌ಗಳ ಪಠ್ಯ ಈಗಾಗಲೇ ಸಿದ್ಧಪಡಿಸಲಾಗಿದೆ.

ಈ ಹೊಸ ಯೋಜನೆಗೆ ವಿ.ವಿ.ಯ ಅಕಾಡೆಮಿಕ್‌ ಕೌನ್ಸಿಲ್‌ನಲ್ಲಿ ಒಪ್ಪಿಗೆ ಪಡೆದು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ಪ್ರಸ್ತಾವ ಸಲ್ಲಿಸಲು ಪ್ರಯತ್ನಗಳು ಆರಂಭವಾಗಿವೆ ಎಂದು ವಿ.ವಿ ಮೂಲಗಳು ತಿಳಿಸಿವೆ.

ಮಲ್ಟಿ ಮೀಡಿಯಾ ಕೇಂದ್ರಕ್ಕಾಗಿ ಯುಜಿಸಿಗೆ ಪ್ರಸ್ತಾವನೆ

‘ಫ್ಯಾಕಲ್ಟಿ ಆಫ್‌ ಕಮ್ಯೂನಿಕೇಷನ್‌’ಗೆ ಅನುಕೂಲವಾಗಲೆಂದು ಮಲ್ಟಿಮೀಡಿಯಾ ಕೇಂದ್ರ ಸ್ಥಾಪಿಸಲು ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರಡಿ ₹ 25 ಕೋಟಿಗೆ ಬೇಡಿಕೆ ಇಟ್ಟಿದ್ದೇವೆ’ ಎಂದು ಕುಲಪತಿ ಕೆ.ಆರ್‌.ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಮೊತ್ತವೇನಾದರೂ ಬಿಡುಗಡೆ ಆದರೆ, ಅದರಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ಬದಿಯ 15 ಎಕರೆ ಪ್ರದೇಶದಲ್ಲಿ ‘ಮಾಧ್ಯಮ ಕೇಂದ್ರ’ ರೂಪಿಸಲಾಗುವುದು. ಅದರಲ್ಲಿ ಸಂವಹನ ಕೋರ್ಸ್‌ಗಳ ಕಲಿಕೆಗೆ ಇರುವಂತ ನವೀನ ತಂತ್ರಜ್ಞಾನದ ಪರಿಕರಗಳನ್ನು ಪರಿಚಯಿಸಲಾಗುವುದು. ಜಾಗತಿಕ ಗುಣಮಟ್ಟದ ಮಾಧ್ಯಮ ಶಿಕ್ಷಣ ನೀಡಲಾಗುವುದು’ ಎಂದು ಅವರು ಕನಸನ್ನು ಬಿಚ್ಚಿಟ್ಟರು.

* ನಮ್ಮ ಕಾರ್ಯಯೋಜನೆಯಂತೆ ಎಲ್ಲ ನಡೆದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ನಾಲ್ಕು ಕೋರ್ಸ್‌ಗಳು ಆರಂಭವಾಗಲಿವೆ.‌

–ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿ.ವಿ.

ಅಂಕಿ–ಅಂಶ

* 2 ವರ್ಷ ಹೊಸ ಕೋರ್ಸ್‌ಗಳ ಅಧ್ಯಯನ ಅವಧಿ

* 20 ಪ್ರತಿ ಕೋರ್ಸ್‌ಗಳಿಗೆ ಇರುವ ಸೀಟುಗಳು

* 8,000 ಪ್ರತಿ ಕೋರ್ಸ್‌ನ ಸರಾಸರಿ ಬೋಧನಾ ಶುಲ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT