ಸೋಮವಾರ, ಜುಲೈ 4, 2022
25 °C

ಜಾರಕಬಂಡೆ ಕಾವಲ್‌ನಲ್ಲಿ ಉದ್ಯಾನ: ಹೃದಯಸ್ಪರ್ಶಿ ನಿರ್ಧಾರ-ವಿ.ರವಿಚಂದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒತ್ತಡ ಲಾಬಿಗಳಿಗೆ ಮಣಿಯದೆಯೇ ಯಲಹಂಕ ಬಳಿ ಜಾರಕಬಂಡೆ ಕಾವಲ್‌ನಲ್ಲಿ 350 ಎಕರೆ ಪ್ರದೇಶದಲ್ಲಿ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನದ ಮಾದರಿಯಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ನಿಜಕ್ಕೂ ಹೃದಯಸ್ಪರ್ಶಿಯಾದುದು. ವಿಶಾಲ ಜಾಗದಲ್ಲಿ ಹಸಿರು ವಲಯ ನಿರ್ಮಿಸುವ ಬಗ್ಗೆ ನಿರ್ಧಾರ ತಳೆಯಲು ನಮ್ಮ ನಾಯಕತ್ವ ವಹಿಸಿಕೊಂಡವರಿಗೆ ಶತಮಾನಗಳೇ ಬೇಕಾದವು!

ಎನ್‌ಜಿಎಫ್‌ನ 105 ಎಕರೆ ಜಾಗದಲ್ಲಿ ಗ್ರಿನ್‌ ಎಕ್ಸ್‌ಪೊ ನಿರ್ಮಿಸುವ ಘೋಷಣೆ, ಈ ಜಾಗವು ಸಾಂಪ್ರದಾಯಿಕ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗೆ ಬಳಕೆಯಾಗುತ್ತದೆಯೇನೋ ಎಂಬ ಆತಂಕವನ್ನು ದೂರಮಾಡಿದೆ. ಎನ್‌ಜಿಎಫ್‌ನ ಬಹುಪಾಲು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವುದು ವಿವೇಕಯುತ ನಿರ್ಧಾರ. ಈ ಜಾಗವು ನಿರ್ದಿಷ್ಟ ಉದ್ದೇಶಕ್ಕೆ ಬಳಸುವ ಬದಲು ಬಹು ಉದ್ದೇಶಗಳಿಗೆ ಬಳಸುವಂತಾಗಬೇಕು.

ಕೆ–100 ಜನರ ನೀರ ಹಾದಿ ಯೋಜನೆ ಇನ್ನೊಂದು ಬಹುಕಾಲದ ಬೇಡಿಕೆ. ಕೊಳಚೆ ನೀರು ರಾಜಕಾಲುವೆಗೆ ಸೇರುವುದನ್ನು ತಡೆಯುವುದು ಹಾಗೂ ರಾಜಕಾಲುವೆ ಹಾಗೂ ಕೆರೆಯಂಗಳನ್ನು ಜನಸ್ನೇಹಿ ತಾಣವನ್ನಾಗಿಸುವುದು ಭಾರಿ ಬದಲಾವಣೆಗಳಿಗೆ ಕಾರಣವಾಗಬಲ್ಲುದು. ರಾಜಕಾಲುವೆ ದುರಸ್ತಿಗೆ ₹ 1500 ಕೋಟಿ ಘೋಷಿಸಲಾಗಿದೆ. ಇಂತಹ ಅನೇಕ ಘೋಷಣೆಗಳನ್ನು ಎರಡು ದಶಕಗಳಿಂದ ನೋಡುತ್ತಿದ್ದೇವೆ. ಆದರೆ, ಇವು ಕಾರ್ಯಗತವಾಗುವುದು ಯಾವಾಗಲೋ. ಭವಿಷ್ಯದಲ್ಲಿ ಪ್ರವಾಹ ತಡೆಯುವ ಉದ್ದೇಶದಿಂದ ಕಾಲುವೆ ವ್ಯವಸ್ಥೆಗೆ ಮಾತ್ರ ಆದ್ಯತೆ ನೀಡಿ, ಜಲಾನಯನ ಪ್ರದೇಶದ ಸಮಗ್ರ ನಿರ್ವಹಣೆಯನ್ನು ಕಡೆಗಣಿಸುವುದು ದೂರದೃಷ್ಟಿಯ ನಿರ್ಧಾರದಂತೆ ತೋರುವುದಿಲ್ಲ. 

ಮೆಟ್ರೊ, ಉಪನಗರ ರೈಲು, ಫೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌), ಬಡವಣೆ ಅಭಿವೃದ್ಧಿಗಳೆಲ್ಲವೂ ಹಳಸಲು ಘೋಷಣೆಗಳು. ಈ ಯೋಜನೆಗಳ ಜಾರಿ ತಡವಾದಷ್ಟೂ ಅವುಗಳ ವೆಚ್ಚವೂ ಹೆಚ್ಚುತ್ತಲೇ ಸಾಗುತ್ತದೆ. 2004ರಲ್ಲಿ ಪಿಆರ್‌ಆರ್‌ ಯೋಜನೆ ಪ್ರಸ್ತಾವ ಸಿದ್ಧವಾದಾಗ ಅದರ ವೆಚ್ಚ ಈಗಿನ ವೆಚ್ಚದ ನಾಲ್ಕನೆ ಒಂದರಷ್ಟೂ ಇರಲಿಲ್ಲ. ಕೆಲವೊಮ್ಮೆ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ವಿಮಾನನಿಲ್ದಾಣ ಸಂಪರ್ಕಕ್ಕೆ ಉಪನಗರ ರೈಲೇ ಸೂಕ್ತವಾದುದು. ಆದರೆ ಅದನ್ನು ಆಯ್ಕೆ ಮಾಡಿಕೊಂಡಿಲ್ಲ. 

ಬಿಬಿಎಂಪಿ ಯಾವ ಯೊಜನೆಗೆ ಎಷ್ಟು ವೆಚ್ಚ ಮಾಡಬೇಕು ಎಂಬುದನ್ನು ಪ್ರತಿ ವರ್ಷವೂ ರಾಜ್ಯ ಸರ್ಕಾರವೇ ನಿರ್ಧರಿಸುತ್ತಿದೆ. ಇದು ವಿಕೇಂದ್ರೀಕರಣ ಪ್ರಕ್ರಿಯೆಗೆ ವಿರುದ್ಧವಾದ ನಡೆ. 

ವಿ. ರವಿಚಂದರ್‌, ನಗರ ಯೋಜನಾ ತಜ್ಞ

‘ಎಲ್ಲರನ್ನು ಒಳಗೊಳ್ಳುವ ನಗರವನ್ನು ಕಟ್ಟಬೇಕಿದೆ’

ನಮ್ಮ ಕ್ಲಿನಿಕ್‌ ಕಾರ್ಯಕ್ರಮ ಜಾರಿ, ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನ, ರಾಜಕಾಲುವೆ ಪುನಃಶ್ಚೇತನಕ್ಕೆ ಅನುದಾನ ಒದಗಿಸುವುದು ಸ್ವಾಗತಾರ್ಹ ನಡೆ. 

ನಗರದ ಸುಂದರೀಕರಣದ ಕಾರ್ಯಕ್ರಮದ ಅಡಿ ಕೆರೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಕೆರೆಗಳು ಮಳೆ ನೀರು ಸಂಗ್ರಹಿಸಲು ನೆರವಾಗುವ ಮೂಲಕ 100 ಕಿ.ಮೀ. ದೂರದಿಂದ ಕಾವೇರಿ ನೀರು ತರಿಸಿಕೊಳ್ಳಲು ಬೇಕಾಗುವ ವಿದ್ಯುತ್‌ ಬಿಲ್‌ ನ್ನು ಉಳಿಸಬಲ್ಲವು. ದೋಷ ಪೂರಿತ ಯೋಜನೆಗಳಿಂದಾಗಿ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ನಿಸರ್ಗವು ಬೆಂಗಳೂರಿಗೆ ಕೊಡುಗೆಯಾಗಿ ಸುರಿಸುವ ಮಳೆ ನೀರಿನ ನಿರ್ವಹಣೆಗೆ ಮಹತ್ವಾಕಾಂಕ್ಷಿ ಯೋಜನೆಗಳಿಲ್ಲ ಎಂಬುದು ನಿಜಕ್ಕೂ ನಿರಾಸೆ ಮೂಡಿಸುತ್ತದೆ.

ನಗರದಲ್ಲಿ ವಸತಿ ಸಮಸ್ಯೆ ಎಷ್ಟು ಭೀಕರವಾಗಿದೆ ಎಂಬುದನ್ನು ಕೋವಿಡ್‌ ಬಿಕ್ಕಟ್ಟು ನಮಗೆ ತೋರಿಸಿಕೊಟ್ಟಿದೆ. ಸಾವಿರಾರು ವಲಸೆ ಕಾರ್ಮಿಕರು ಊರಿಗೆ ಮರಳಿದರು– ಏಕೆಂದರೆ ಅವರೆಲ್ಲ ಬೆಂಗಳೂರನ್ನು ‘ತವರು’ ಎಂದು ಪರಿಗಣಿಸಿಯೇ ಇರಲಿಲ್ಲ. ಕೈಗೆಟಕುವ ದರದಲ್ಲಿ ವಸತಿ ಒದಗಿಸುವುದಕ್ಕೆ ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ.  ಕೋವಿಡ್‌ ಬಿಕ್ಕಟ್ಟಿನಿಂದ ಪಾಠ ಬಳಿಕವಾದರೂ ಎಲ್ಲರನ್ನೂ ಒಳಗೊಳ್ಳುವ, ಎ‌ಲ್ಲರೂ ಘನತೆಯ ಬದುಕನ್ನು ಕಾಣುವಂತಹ ಹಾಗೂ ಮಕ್ಕಳ ಆರೈಕೆ, ಶಿಕ್ಷಣ ಹಾಗೂ ಆರೋಗ್ಯ ಸೇವೆ ಎಲ್ಲರಿಗೂ ಸುಲಭವಾಗಿ ದಕ್ಕುವಂತಹ ನಗರವನ್ನಾಗಿ ಬೆಂಗಳೂರನ್ನು ಕಟ್ಟಬೇಕಿತ್ತು. 

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ವಿಶೇಷ ಸ್ಥಾನ ಪಡೆಯುವ ಏಕೈಕ ನಗರ ಬೆಂಗಳೂರು. ಬೇರೆ ಯಾವುದೇ ನಗರಕ್ಕೂ ಇಂತಹ ವಿಶೇಷ ಸ್ಥಾನಮಾನವಿಲ್ಲ. ಬೆಂಗಳೂರು ರಾಜ್ಯದ ಆರ್ಥಿಕ ಎಂಜಿನ್‌ ಎಂದು ಈ ವಿಶೇಷ ಸ್ಥಾನಮಾನವನ್ನು ಕೆಲವರು ಸಮರ್ಥಿಸಿಕೊಳ್ಳಲೂ ಬಹುದು. ಬೆಂಗಳೂರು ಕರ್ನಾಟಕದ ಏಕೈಕ ಆರ್ಥಿಕ ಎಂಜಿನ್‌ ಆದರೆ ಅದು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಆಗಬೇಕಾದರೆ ಕನಿಷ್ಠ ಪಕ್ಷ  ಈ ನಗರದಷ್ಟೇ ಉದ್ಯಮಶೀಲವಾದ, ಪ್ರಗತಿಪರವಾದ ಹಾಗೂ ಶೈಕ್ಷಣಿಕವಾಗಿ ಮುಂದುವರಿದ ಇಂತಹ 10 ಆರ್ಥಿಕ ಕೇಂದ್ರಗಳಾದರೂ ರೂಪುಗೊಳ್ಳಬೇಕು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೇವಲ ಒಂದು ರಾಜ್ಯಕ್ಕೆ ಮಾತ್ರ ಪ್ರಾಶಸ್ತ್ಯ ನೀಡುವುದನ್ನು ನಾವು ಒಪ್ಪಿಕೊಳ್ಳುತ್ತೇವೆಯೇ? ಕೇಂದ್ರ ಹಣಕಾಸು ಆಯೊಗವು ಎಲ್ಲರಿಗೂ ಒಪ್ಪಿಗೆಯಾಗುವಂತಹ ಸೂತ್ರವನ್ನು ಬಳಸಿ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ ಎಂದಾದರೆ, ರಾಜ್ಯ ಹಣಕಾಸು ಆಯೋಗಕ್ಕೆ ಇದು ಏಕೆ ಸಾಧ್ಯವಾಗುವುದಿಲ್ಲ? 

ಶ್ರೀನಿವಾಸ ಅಲವಿಲ್ಲಿ, ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು