ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಬೇಡಿಕೆ: ಬಜೆಟ್ ದಿನವೇ ಮುತ್ತಿಗೆಗೆ ಯತ್ನ

ಸಿ.ಎಂ.ಮನೆ ಮುಂದೆ ಪಂಚಮಸಾಲಿ ಮಹಿಳಾ ಘಟಕದ ಪ್ರತಿಭಟನೆ
Last Updated 8 ಮಾರ್ಚ್ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿ ಸಮಾಜದ ಮಹಿಳಾ ಘಟಕದ ಸದಸ್ಯೆಯರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಸೋಮವಾರ ಬೆಳಿಗ್ಗೆ ಯತ್ನಿಸಿದರು.

ವಿಧಾನಸೌಧದಲ್ಲಿ ಬಜೆಟ್ ಮಂಡಿಸುವುದಕ್ಕಾಗಿ ಮುಖ್ಯಮಂತ್ರಿಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲೇ ದಿಢೀರ್ ನಿವಾಸದ ಎದುರು ಸೇರಿದ್ದ ಪ್ರತಿಭಟನಕಾರರು, ಒಳಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಮಹಿಳೆಯರನ್ನು ತಡೆದರು. ಹಲವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು.

ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಮನೆ ಎದುರಿನ ರಸ್ತೆಯಲ್ಲೇ ಕುಳಿತು ಮಹಿಳೆಯರು ಪ್ರತಿಭಟನೆ ಮುಂದುವರಿಸಿದರು. ರಾಜ್ಯ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಯಾವುದೇ ಅನುಮತಿ ಇಲ್ಲದೇ ಪ್ರತಿಭಟನಕಾರರು ಏಕಾಏಕಿ ನಿವಾಸದ ಎದುರು ಬಂದಿದ್ದರು. ವಾಪಸು ಹೋಗುವಂತೆ ಹೇಳಿದರೂ ಸ್ಪಂದಿಸಲಿಲ್ಲ. 40ಕ್ಕೂ ಹೆಚ್ಚು ಮಹಿಳೆಯರನ್ನು ವಶಕ್ಕೆ ಪಡೆದು, ಸಂಜೆ ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

2ಎಗೆ ಸೇರಿಸುವಂತೆ ಘೋಷಣೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯರು, ಇಂದು ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ’ ಎಂದು ಪ್ರತಿಭಟನನಿರತರು ಹೇಳಿದರು.

‘ನಮ್ಮ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಬೇಕು. ಇಲ್ಲದಿದ್ದರೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದೂ
ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT