ಶನಿವಾರ, ಮೇ 8, 2021
19 °C
ಪುಟ್ಟೇನಹಳ್ಳಿ ಸಿಗ್ನಲ್ ಬಳಿ ಘಟನೆ l ಎಂಟು ಕುಟುಂಬಗಳು ಸುರಕ್ಷಿತ l ತುರ್ತು ರಕ್ಷಣಾ ಕಾರ್ಯ

ಕುಸಿದ ಕಟ್ಟಡ: ತಪ್ಪಿದ ಭಾರಿ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬನಶಂಕರಿ ವ್ಯಾಪ್ತಿಯ ಪುಟ್ಟೇನಹಳ್ಳಿ ಸಿಗ್ನಲ್ ಸಾರಕ್ಕಿ ವೃತ್ತದ ಬಳಿ ಮೂರು ಅಂತಸ್ತಿನ ಕಟ್ಟಡ ಭಾನುವಾರ ಸಂಜೆ 6.30ರ ಸುಮಾರಿಗೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಮೂರು ಅಂತಸ್ತಿನ ಕಟ್ಟಡ ಕುಸಿದು, ನೆಲ ಮಹಡಿಗೆ ಬಿದ್ದಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಎರಡು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿದ್ದ ಎಂಟು ಕುಟುಂಬಗಳನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಯಶಸ್ವಿಯಾದರು.

‘ಕಟ್ಟಡ ಪೂರ್ಣವಾಗಿ ಕುಸಿಯುವ ಸ್ಥಿತಿಯಲ್ಲಿದೆ. ಕಟ್ಟಡದಲ್ಲಿ ನೆಲೆಸಿದ್ದ ಕುಟುಂಬಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಕಟ್ಟಡದ ಗೋಡೆಗಳು ನಿಧಾನವಾಗಿ ಕುಸಿಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದರು.

ಕಟ್ಟಡದ ನೆಲಮಹಡಿಯಲ್ಲಿ ತರಕಾರಿ ಅಂಗಡಿ, ಮಾಂಸದ ಅಂಗಡಿ ಸೇರಿ ಒಟ್ಟು ನಾಲ್ಕು ಅಂಗಡಿಗಳಿವೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಮನೆಗಳಿವೆ. ಭಾನುವಾರ ಬೆಳಗ್ಗಿನಿಂದಲೇ ಕಟ್ಟಡ ಬಿರುಕು ಬಿಡುತ್ತಿದ್ದ ಶಬ್ಧ ಕೇಳಿಸಿತ್ತು. ಆದರೂ, ಅಲ್ಲಿದ್ದ ಕುಟುಂಬಗಳು ಮತ್ತು ಅಂಗಡಿಯಲ್ಲಿದ್ದವರು ಹೊರಗೆ ಬಂದಿರಲಿಲ್ಲ. ಸಂಜೆ 6.25ರಲ್ಲಿ ಏಕಾಏಕಿ ಗೋಡೆ ಬಿರುಕು ಬಿಡುತ್ತಿದ್ದ ಶಬ್ದ ಕೇಳಿ ಅಂಗಡಿಯಲ್ಲಿದ್ದವರು ಮತ್ತು ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ನಂತರದ ಕೆಲವೇ ನಿಮಿಷಗಳಲ್ಲಿ ಮೊದಲನೆ ಮಹಡಿಯು ನೆಲಮಹಡಿಗೆ ಕುಸಿದು ಬಿದ್ದಿದೆ. ಮಾಂಸದ ಅಂಗಡಿಯಲ್ಲಿದ್ದ ಕೋಳಿ, ಕುರಿ, ಮೇಕೆ ಅವಶೇಷಗಳಡಿ ಸಿಲುಕಿ ಸತ್ತಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದರು.

ಬಿರುಕು ಬಿಟ್ಟಿದ್ದ ಕಟ್ಟಡ

30X40 ನಿವೇಶನದಲ್ಲಿ ನಿರ್ಮಾಣ ಆಗಿರುವ ಕಟ್ಟಡ ಗೌತಮ್ ಎಂಬುವವರಿಗೆ ಸೇರಿದ್ದು, 30 ವರ್ಷ ಹಳೆಯದು. ಕೆಲವು ವರ್ಷಗಳ ಹಿಂದೆಯೇಕಟ್ಟಡದಲ್ಲಿ ಬಿರುಕು ಕಾಣಿಸಿ ಕೊಂಡಿತ್ತು. ಆದರೆ, ಬಾಡಿಗೆ ಸಿಗುತ್ತಿದೆ ಎಂಬ ಕಾರಣಕ್ಕೆ ಈ ಕಟ್ಟಡದಲ್ಲಿ ನೆಲೆಸಿದ್ದ ಎಂಟು ಕುಟುಂಬಗಳನ್ನು ಮಾಲೀಕ ತೆರವು ಮಾಡಿಸಿರಲಿಲ್ಲ ಎನ್ನಲಾಗಿದೆ.

ಕೆಲ ಕುಟುಂಬಗಳು ಈಚೆಗೆ ಸ್ವಯಂ ಮನೆ ಖಾಲಿ ಮಾಡಿದ್ದವು. ಕಟ್ಟಡ ಕುಸಿದ ವಿಷಯ ತಿಳಿಯುತ್ತಿದ್ದಂತೆ ಗೌತಮ್ ತಲೆಮರೆಸಿಕೊಂಡಿದ್ದು, ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಕಟ್ಟಡದ ಪಕ್ಕ ವಿದ್ಯುತ್ ತಂತಿ ಹಾದುಹೋಗಿದ್ದು, ಕಟ್ಟಡ ಕುಸಿತದಿಂದಾಗಿ ತಂತಿ ತುಂಡಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ ಎಂದು ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು