ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕುಸಿತ | ಧರ್ಮಕೇಶವ ಇನ್‌ಫ್ರಾ ಪೈವೇಟ್‌ ಕಂಪನಿ ವಿರುದ್ಧ ಪ್ರಕರಣ

ಕಾಮಗಾರಿ ವೇಳೆ ಎರಡು ಕಟ್ಟಡ ಕುಸಿತ
Last Updated 29 ಜುಲೈ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿನಗರದಲ್ಲಿ ನಾಟಕರತ್ನ ಗುಬ್ಬಿವೀರಣ್ಣ ರಸ್ತೆ ಬಳಿ ಕಪಾಲಿ ಚಿತ್ರಮಂದಿರ ವಿದ್ಧ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸಲು ಪಯ ತೆಗೆಯುವ ವೇಳೆ ಪಕ್ಕದ ಎರಡು ಕಟ್ಟಡಗಳು ಕುಸಿದ ಸಂಬಂಧ ಇಲ್ಲಿ ಕಾಮಗಾರಿ ನಡೆಸುತ್ತಿದ್ದ ಧರ್ಮಕೇಶವ ಇನ್‌ಫ್ರಾ ಪೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಟ್ಟಡ ಯೋಜನೆಗೆ ನೀಡಿದ್ದ ಮಂಜೂರಾತಿಯನ್ನು ರದ್ದು ಪಡಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಾಳಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರ ಯೋಜನೆವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದ್ದಾರೆ.

ಕಪಾಲಿ ಚಿತ್ರ ಮಂದಿರವನ್ನು ಕೆಡವಿ ಆ ಜಾಗದಲ್ಲಿ ಹೊಸ ಕಟ್ಟಡ ನಿರಮಿಸಲಾಗುತ್ತಿತ್ತು. ಇಲ್ಲಿ ಧರ್ಮಕೇಶವ ಇನ್‌ಫ್ರಾ ಕಂಪನಿಯು ನಾಲ್ಕು ಬೇಸ್‌ಮೆಂಟ್‌ ಮಹಡಿಗಳನ್ನೊಳಗೊಂಡ ಹೊಸ ಕಟ್ಟಡ ನಿರ್ಮಿಸುತ್ತಿತ್ತು. ಈ ಕಟ್ಟಡ ಯೋಜನೆಯ ನಕ್ಷೆಗೆ ಬಿಬಿಎಂಪಿಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರು 2019 ಏ 23ರಂದು ಮಂಜೂರಾತಿ ನೀಡಿದ್ದರು. ಈ ಕಟ್ಟಡ ನಿರ್ಮಿಸಲು ಪಾಯ ತೆಗೆಯುವ ವೇಳೆ ಎರಡು ಕಟ್ಟಡಗಳು ಮಂಗಳವಾರ ಕುಸಿದಿದ್ದವು.

ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲಿದ್ದ ಮಿಥುನ್‌ ಗೆಸ್ಟ್‌ ಹೌಸ್‌ ಹಾಗೂ ಅರಾಫ ಗೆಸ್ಟ್‌ ಹೌಸ್‌ ಕಟ್ಟಡಗಳಲ್ಲಿ ಭಾನುವಾರವೇ ಬಿರುಕು ಕಾಣಿಸಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜು ಅವರು ಸೋಮವಾರವೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಅಲ್ಲದೇ ಉಪ್ಪಾರಪೇಟೆ ಪೊಲೀಸ್‌ ಠಾಣೆಗೂ ಕಂಪನಿ ವಿರುದ್ಧ ದೂರು ನೀಡಿದ್ದರು. ಅಕ್ಕಪಕ್ಕದ ಕಟ್ಟಡದಲ್ಲಿರುವವರನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಸೂಚಿಸಿದ್ದರು. ಅಪಾಯಕಾರಿ ಸ್ಥಳಕ್ಕೆ ಯರೂ ಹೋಗದಂತೆ ತಡೆಯಲು ಪ‍ಟ್ಟಿ ಕಟ್ಟಿ, ಸೂಚನಾ ಫಲಕ ಹಾಕಿಸಿದ್ದರು.

ಕಟ್ಟಡ ಕುಸಿದ ಸ್ಥಳಕ್ಕೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಹಾಗೂ ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕಟ್ಟಡ ಕುಸಿತಕ್ಕೆ ಕಾರಣವಾದ ಕಾಮಗಾರಿ ನಡೆಸುತ್ತಿದ್ದ ಸಂಸ್ಥೆಯ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಅಧಿಕಾರಿಗಳಿಂದ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಮೇಯರ್‌ ತಿಳಿಸಿದರು.

‘ಕಟ್ಟಡ ಕುಸಿದ ಅಕ್ಕಪಕ್ಕದ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಕೆಲವೊಂದು ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ, ಅಲ್ಲಿ ನೆಲೆಸಿರುವವರನ್ನು ಕೂಡಲೆ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌, ‘ಕಟ್ಟಡ ಕಾಮಗಾರಿ ಆರಂಭಿಸುವ ಮುನ್ನ ನಾಲ್ಕು ಕಡೆಯೂ ತಡೆಗೋಡೆ ನಿರ್ಮಿಸಬೇಕು. ಆದರೆ ಇಲ್ಲಿ ಅದರೆ ಮೂರು ಕಡೆ ನಿರ್ಮಾಣ ಮಾಡಿದ್ದಾರೆ. ತಡೆಗೋಡೆ ನಿರ್ಮಿಸದ ಕಾರಣ ಪಕ್ಕದ ಕಟ್ಟಡ ಕುಸಿದಂತಿದೆ.ಕಟ್ಟಡ ಕುಸಿತದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ನಗರ ಯೋಜನೆ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಪಾಲಿಕೆ ವತಿಯಿಂದ ಕಟ್ಟಡ ಯೋಜನೆಗೆ ಅನುಮತಿ ನೀಡಿದ್ದೆಷ್ಟು, ನೆಲದಡಿಯ ಮಹಡಿಗಳಿಗೆ ಎಷ್ಟು ಆಳಕ್ಕೆ ಅಗೆದಿದ್ದಾರೆ ಎಂಬುದನ್ನು ತನಿಖೆ ಮಾಡಲು ಸೂಚಿಸಿದ್ದೇನೆ’ ಎಂದರು.

‘ಕಟ್ಟಡ ಯೋಜನೆಗೆ ನೀಡಿದ್ದ ಮಂಜೂರಾತಿಯನ್ನು ತಕ್ಷಣದಿಂದ ರದ್ದುಗೊಳಿಸುತ್ತೇವೆ. ಸಂತ್ರಸ್ತರಿಗೆ ಪರಿಹಾರವನ್ನು ಕಾಮಗಾರಿ ನಡೆಸುತ್ತಿದ್ದ ಭೂಮಾಲೀಕರೇ ನೀಡಬೇಕು. ಎಷ್ಟು ಹಾನಿಯಾಗಿದೆ ಎಂಬುದನ್ನು ಪಾಲಿಕೆಯಿಂದ ಅಂದಾಜಿಸಿ ಸಂತ್ರಸ್ತರಿಗೆ ಪರಿಹಾರ ಕೊಡಿಸಲಾಗುವುದು’ ಎಂದು ಹೇಳಿದರು.

–0–

‘ಜೀವ ಉಳಿಸಿದ ಸಂತೃಪ್ತಿ–ಕಟ್ಟಡ ಕಳೆದುಕೊಂಡ ದುಃಖ’

‘ನನಗೆ ಕಟ್ಟಡ ಕಳೆದುಕೊಂಡ ದುಃಖ ಒಂದೆಡೆಯಾದರೆ, ಅದರಲ್ಲಿ ಸುಮಾರು 25 ಮಂದಿಯ ಜೀವಿ ಉಳಿಸಿದ ಸಂತೃಪ್ತಿ ಇದೆ’ ಎಂದು ಕುಡಿದ ಕಟ್ಟಡದ ಮಾಲಕಿ ರತ್ನ ‘ಪ್ರಜಾವಾಣಿ’ಗೆ ತಿಳಿಸಿದರು. ನಮ್ಮ ಕಟ್ಟಡ ಬಿರುಕು ಬಿಡುತ್ತಿರುವ ಬಗ್ಗೆ ಅಲ್ಲಿನ ಬಾಡಿಗೆದಾರರು ಭಾನುವಾರ ಮಧ್ಯಾಹ್ನ ತಿಳಿಸಿದರು. ಸ್ಥಳಕ್ಕೆ ಹೋಗಿ ನೋಡಿದಾಗ ಬಿರುಕು ಕಾಣಿಸಿತ್ತು. ಗಾಬರಿಯಿಂದ ಹೊಸ ಕಟ್ಟಡಕ್ಕೆ ಪಾಯ ತಗೆಯುತ್ತಿದ್ದ ಸೈಟ್‌ ಎಂಜಿನಿಯರ್‌ ಅವರನ್ನು ಕರೆಸಿದೆ. ಅವರು ಬಿರುಕು ಮುಚ್ಚಿಸಿಕೊಡುತ್ತೇವೆ. ಭಯ ಪಡಬೇಡಿ ಎಂದರು. ಮಂಗಳವಾರ ದಿನವಿಡೀ ಅಲ್ಲೇ ಇದ್ದೆ. ಬಿಬಿಎಂಪಿ ಎಂಜಿನಿಯರ್‌ಗೆ ದೂರು ನೀಡಿದೆ. ಅವರು ಬಂದು ಅಕ್ಕ ಪಕ್ಕದ ಕಟ್ಟಡಗಳನ್ನು ತೆವರುಗೊಳಿಸುವಂತೆ ಸೂಚಿಸಿದರು’ ಎಂದು ಕುಸಿದ ಕಟ್ಟಡ ಮಾಲಕಿ ರತ್ನ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾನು ಹೇಳಿದರೂ ಬಾಡಿಗೆದಾರರು ತೆರವು ಮಾಡಲು ಕೇಳಲಿಲ್ಲ. ಅವರನ್ನು ಒತ್ತಾಯಪೂರ್ವವಾಗಿ ಹೊರಗೆ ಕಳುಹಿಸಬೇಕಾಯಿತು. ಅವರು ಅಲ್ಲೇ ಇರುತ್ತಿದ್ದರೆ ಖಂಡಿತಾ ಪ್ರಾಣ ಹಾನಿ ಆಗುತ್ತಿತ್ತು’ ಎಂದರು. ‘ನಾನು ಕಟ್ಟಡವನ್ನು ಬಾಡಿಗೆಗೆ ನೀಡಿದ್ದೆ. ಅಲ್ಲಿ ಮೂವರು ಪಿ.ಜಿ ನಡೆಸುತ್ತಿದ್ದರು. ಅವರು ಈಗ ಮುಂಗಡ ಹಣವನ್ನು ಮರುಪಾವತಿಸುವಂತೆ ಹಾಗೂ ಅವರ ಸರಕು ನಷ್ಟದಿಂದ ಉಂಟಾದ ನಷ್ಟ ತುಂಬಿಕೊಡುವಂತೆ ನನ್ನನ್ನು ಪೀಡಿಸುತ್ತಿದ್ದಾರೆ. ಇದರಲ್ಲಿ ನನ್ನ ತಪ್ಪೇನು ಇಲ್ಲ. ನನ್ನ ಕಟ್ಟಡ ಸದೃಢವಾಗಿತ್ತು. ಮೂರು ವರ್ಷದ ಹಿಂದೆ ನಾನದನ್ನು ಖರೀದಿಸಿದ್ದೆ’ ಎಂದರು. ‘ಪಕ್ಕದ ನಿವೇಶನದಲ್ಲಿ ನಿರ್ಮಿಸುತ್ತಿದ್ದ ಹೊಸ ಕಟ್ಟಡದ ಪಾಯದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಅವರು ಮುನ್ನೆಚ್ಚರಿಕೆ ವಹಿಸದ ಕಾರಣ ನಾವು ಸುಮಾರು ₹ 27 ಕೋಟಿ ನಷ್ಟ ಅನುಭವಿಸುವಂತಾಗಿದೆ. ಬಾಡಿಗೆಗೆ ಇದ್ದವರ ₹ 4 ಕೋಟಿ ಸಾಮಗ್ರಿಗಳು ನಷ್ಟವಾಗಿವೆ. ಕಾಮಗಾರಿ ನಡೆಸುತ್ತಿದ್ದವರು ಯರು ಗೊತ್ತಿಲ್ಲ. ಅವರಿನ್ನೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ರತ್ನಾ ಅವರು ತಿಳಿಸಿದರು.

‘ಎಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಿಲ್ಲ. ನಮ್ಮ ನಾಲ್ಕು ಮಹಡಿಯ ಕಟ್ಟಡ ಕುಸಿತಕ್ಕೆ ಕಾರಣವಾದ ಕಾಮಗಾರಿ ನಡೆಸುತ್ತಿದ್ದಸಂಸ್ಥೆಯವರು ಇನ್ನೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಕುಸಿದ ಇನ್ನೊಂದು ಕಟ್ಟಡದ ಮಾಲೀಕ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT