ಭಾನುವಾರ, ನವೆಂಬರ್ 28, 2021
20 °C
ಗುಡುಗು–ಸಿಡಿಲು ಸಮೇತ ಮಳೆ ಅಬ್ಬರ l ಹಲವೆಡೆ ಮನೆಗಳಿಗೆ ನುಗ್ಗಿದ ನೀರು

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಕಟ್ಟಡ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಶನಿವಾರವೂ ಹಲವೆಡೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯ ಅಬ್ಬರ ಜೋರಾಗಿತ್ತು. ಕಮರ್ಷಿಯಲ್ ಸ್ಟ್ರೀಟ್‌ ಮುಖ್ಯರಸ್ತೆಯಲ್ಲಿದ್ದ 100 ವರ್ಷ ಹಳೇ ಕಟ್ಟಡವೊಂದು ಮಧ್ಯಾಹ್ನ ಕುಸಿದು ಬಿದ್ದಿತು.

ಕಟ್ಟಡ ಕುಸಿದ ಸ್ಥಳದಲ್ಲಿ ಅದರ ಅವಶೇಷಗಳಡಿ ದ್ವಿಚಕ್ರ ವಾಹನ ಹಾಗೂ ಪೀಠೋಪಕರಣಗಳು ಸಿಲುಕಿದ್ದವು. ಅವಶೇಷಗಳ ತೆರವು ಕಾರ್ಯಾಚರಣೆ ರಾತ್ರಿಯವರೆಗೂ ನಡೆಯಿತು.

‘ಹಳೇ ಕಟ್ಟಡವಾಗಿದ್ದರಿಂದ, ನಿರಂತರ ಮಳೆಯಿಂದಾಗಿ ಹಾನಿ ಆಗಿತ್ತು. ಶುಕ್ರವಾರವೇ ಕಟ್ಟಡದ ಗೋಡೆಯ ಒಂದು ಭಾಗದಲ್ಲಿ ಇಟ್ಟಿಗೆಗಳು ಕುಸಿದು ಬಿದ್ದಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು, ಕಟ್ಟಡ ಪರಿಶೀಲನೆ ನಡೆಸಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕಟ್ಟಡ ಹಾಗೂ ಅದರ ಸುತ್ತಮುತ್ತಲಿನ 6 ಮಳಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ಸ್ಥಳಾಂತರಗೊಳಿಸಿದ್ದರು. ಈ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧ ವಿಧಿಸಿ ಸೂಚನಾ ಪಟ್ಟಿಗಳನ್ನು ಕಟ್ಟಿದ್ದರು. ಹೀಗಾಗಿ, ಯಾರೂ ಕಟ್ಟಡ ಬಳಿ ಹೋಗಲಿಲ್ಲ. ಮಧ್ಯಾಹ್ನ ಕಟ್ಟಡ ಕುಸಿದರೂ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ’ ಎಂದೂ ತಿಳಿಸಿದರು.

‘ಎರಡು ವರ್ಷಗಳ ಹಿಂದೆಯೂ ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿರುವ ಮಾಹಿತಿ ಸಿಕ್ಕಿದೆ. ನಿವೇಶನಕ್ಕೆ ಸಂಬಂಧಿ
ಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದಿದ್ದರಿಂದ, ಕಟ್ಟಡದ ತೆರವು ಸಾಧ್ಯವಾಗಿರಲಿಲ್ಲ’ ಎಂದೂ ಅಧಿಕಾರಿ ವಿವರಿಸಿದರು.

ಮಳೆ ಶುರುವಾದ ಬಳಿಕ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ರಸ್ತೆಯಲ್ಲಿ ಜನ ಓಡಾಡಲೂ ಸಮಸ್ಯೆ ಎದುರಿಸು
ವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿರುವುದೇ ದುಃಸ್ಥಿತಿಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ನಂತರ, ಹಲವೆಡೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಜಿಟಿ ಜಿಟಿ ಮಳೆ ಶುರುವಾಯಿತು. ನಂತರ, ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತ್ತು. ಮಳೆ ಜೊತೆ, ಗಾಳಿ, ಗುಡುಗು– ಸಿಡಿಲಿನ ಅಬ್ಬರವೂ ಹೆಚ್ಚಿತ್ತು. ಮಧ್ಯಾಹ್ನ ಶುರುವಾದ ಮಳೆ, ಹಲವೆಡೆ ಸಂಜೆ ಹಾಗೂ ರಾತ್ರಿಯವರೆಗೂ ಉತ್ತಮವಾಗಿ ಸುರಿಯಿತು. ಅಲ್ಲೆಲ್ಲ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ನಗರದಲ್ಲಿ ವಿವಿಧ ಕಡೆ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರಾಜಕಾಲುವೆ ಕಾಮಗಾರಿಗಳು ನಡೆಯುತ್ತಿದ್ದು, ಜೋರು ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ.

ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ದೀಪಾಂಜಲಿನಗರ, ಪಾದರಾಯನಪುರ, ಚಾಮರಾಜಪೇಟೆ, ಕಾಟನ್‌ಪೇಟೆ, ಚಿಕ್ಕಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಹನುಮಂತನಗರ, ಗಿರಿನಗರ, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಯಿತು.

ಯಶವಂತಪುರ, ಪೀಣ್ಯ, ದಾಸರಹಳ್ಳಿ, ಹೆಬ್ಬಾಳ, ವಸಂತನಗರ, ಶಿವಾಜಿನಗರ, ಆರ್‌.ಟಿ.ನಗರ, ಸಂಜಯನಗರ, ಜೆ.ಸಿ.ನಗರ, ಶೇಷಾದ್ರಿಪುರ, ವಿಲ್ಸನ್ ಗಾರ್ಡನ್, ಶಾಂತಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಬೆಳ್ಳಂದೂರು, ವಿದ್ಯಾರಣ್ಯಪುರ, ಯಲಹಂಕ ಹಾಗೂ ಸುತ್ತಮುತ್ತ ಮಳೆ ಜೋರಾಗಿತ್ತು.

ನಿತ್ಯದ ಕೆಲಸಗಳಿಗಾಗಿ ಸುರಿಯುವ ಮಳೆಯಲ್ಲೇ ಜನರು ಸಂಚರಿಸಿದರು. ಕೆಲವರು, ಕೊಡೆ ಆಶ್ರಯದಲ್ಲಿ ಸುತ್ತಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಅಲ್ಲೆಲ್ಲ ನೀರು ನಿಂತುಕೊಂಡಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು.

ಮನೆಗಳಿಗೆ ನುಗ್ಗಿದ ನೀರು

ದೊಡ್ಡಬೊಮ್ಮಸಂದ್ರ, ರಾಜರಾಜೇಶ್ವರಿನಗರ, ದೊಮ್ಮಲೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಾಲುವೆ ನೀರು ಮನೆಗಳಿಗೆ ನುಗ್ಗಿತ್ತು. ಹಬ್ಬದ ಸಂಭ್ರಮ ಮುಗಿಸಿದ್ದ ನಿವಾಸಿಗಳು, ಮನೆಗೆ ನುಗ್ಗಿದ್ದ ನೀರು ಹೊರ ಹಾಕುವುದರಲ್ಲೇ ದಿನ ಕಳೆದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಲುವೆಗಳು ತುಂಬಿ ಹರಿಯುತ್ತಿವೆ. ರಸ್ತೆಗಳಲ್ಲೂ ಹೊಳೆಯಂತೆ ನೀರು ಹರಿಯುತ್ತಿವೆ. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿದ್ದರಿಂದ ಮನೆಗಳಿಗೆ ನುಗ್ಗುತ್ತಿದೆ. ಮನೆಯೊಳಗೆ ಕಸವೂ ಸೇರುತ್ತಿದ್ದು, ಇದರಿಂದ ದುರ್ನಾತ ಬರುತ್ತಿದೆ.

ಉರುಳಿ ಬಿದ್ದ ಮರಗಳು

ನಿರಂತರ ಮಳೆಯಿಂದಾಗಿ ಜಯನಗರ 9ನೇ ಹಂತದಲ್ಲಿ ದೊಡ್ಡ ಗಾತ್ರದ ಮರವೊಂದು ಉರುಳಿಬಿದ್ದಿತ್ತು. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು. ದಟ್ಟಣೆಯೂ ಕಂಡುಬಂತು. ಈ ಬಗ್ಗೆ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ದೂರು ನೀಡಿದ್ದರು. ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದರು. ಬಳಿಕವೇ ವಾಹನಗಳ ಸಂಚಾರ ಯಥಾಸ್ಥಿತಿಗೆ ಮರಳಿತು.

ಕುಮಾರಸ್ವಾಮಿ ಲೇಔಟ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲೂ ದೊಡ್ಡ ಗಾತ್ರದ ಮರದ ಕೊಂಬೆಗಳು ಬಿದ್ದಿದ್ದವು. ಅಲ್ಲೆಲ್ಲ ಕೊಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು