ಸೋಮವಾರ, ಮಾರ್ಚ್ 1, 2021
30 °C
ಬೆಂಗಳೂರಿನ ಪುಲಿಕೇಶಿನಗರದಲ್ಲಿ ದುರಂತ * 60 ಕುಟುಂಬಗಳ ಸ್ಥಳಾಂತರ

ಬೇಸ್‌ಮೆಂಟ್ ಕುಸಿತ; ದಂಪತಿ ಸೇರಿ ಐವರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಿಯ ಪುಲಿಕೇಶಿನಗರ ಸಮೀಪದ ಕಾಕ್ಸ್‌ ಟೌನ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬೇಸ್‌ಮೆಂಟ್‌ ಮಂಗಳವಾರ ತಡರಾತ್ರಿ ಕುಸಿದು, ಅವಶೇಷಗಳಡಿ ಸಿಲುಕಿ ದಂಪತಿ ಸೇರಿ ಐವರು ದುರ್ಮರಣಕ್ಕೀಡಾಗಿದ್ದಾರೆ.

ಕಟ್ಟಡದ ಕಾವಲುಗಾರ ನೇಪಾಳದ ನಾರಾಯಣ (28), ಅವರ ಪತ್ನಿ ನಿರ್ಮಲಾ (26), ಮಗಳು ಅನುಷ್ಕಾ (4) ಹಾಗೂ ಕಾರ್ಮಿಕರಾದ ಪಶ್ಚಿಮ ಬಂಗಾಳದ ಶಂಭುಕುಮಾರ್ (38), ಖಗೆನ್ ಸರ್ಕಾರ್ (45) ಮೃತಪಟ್ಟವರು. ಕಾರ್ಮಿಕರಾದ ರಾಮ ಬಾಲಕ್ (40), ಬೆದಾಮ್ (25), ಅಮೀರ್ ರಾಮ್ (45) ಹಾಗೂ ರಂಜು ಬೇಬಿ (38) ಗಾಯಗೊಂಡಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಕ್ಸ್‌ ಟೌನ್‌ನ ಹುಚಿನ್ಸ್ ರಸ್ತೆಯ ಎರಡನೇ ಅಡ್ಡರಸ್ತೆಯಲ್ಲಿರುವ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಅದರ ಪಕ್ಕದಲ್ಲೇ ಇದ್ದ ‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬೇಸ್‌ಮೆಂಟ್‌ಗಳು ತಡರಾತ್ರಿ 1.15ರ ಸುಮಾರಿಗೆ ದಿಢೀರ್ ಕುಸಿದು ಬಿದ್ದವು.

‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿದ್ದ ಚಿಕ್ಕ ಕೊಠಡಿಯಲ್ಲಿ ವಾಸವಿದ್ದ ನಾರಾಯಣ, ನಿರ್ಮಲಾ ಹಾಗೂ ಅನುಷ್ಕಾ ಅವರು ಅವಶೇಷಗಳಡಿ ಸಿಕ್ಕಿದ್ದರಿಂದ ಮೂವರೂ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಸಿಲುಕಿ ಶಂಭುಕುಮಾರ್ ಹಾಗೂ ಖಗೆನ್ ಸರ್ಕಾರ್ ಸಹ ದುರ್ಮರಣಕ್ಕೀಡಾಗಿದ್ದಾರೆ.

ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದರು. 

ನಾಲ್ವರ ರಕ್ಷಣೆ: ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಸಿಲುಕಿ ಕೂಗಾಡುತ್ತಿದ್ದ ನಾಲ್ವರನ್ನು ರಕ್ಷಣಾ ಪಡೆಗಳ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಎರಡೂ ಕಟ್ಟಡಗಳ ಬೇಸ್‌ಮೆಂಟ್ ಮಾತ್ರ ಕುಸಿದಿದ್ದು, ಮೇಲ್ಭಾಗ ಹಾಗೇ ಇತ್ತು. ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ರಾಮ ಬಾಲಕ್, ಬೆದಾಮ್, ಅಮೀರ್ ರಾಮ್ ಹಾಗೂ ರಂಜು ಬೇಬಿ ಸಿಲುಕಿಕೊಂಡಿದ್ದರು. ಅವರ ತಲೆಗಳು ಮಾತ್ರ ಹೊರಗಡೆಗೆ ಕಾಣುತ್ತಿದ್ದವು. ಆದರೆ, ಅವರಿದ್ದ ಸ್ಥಳಕ್ಕೆ ಹೋಗುವುದು ಕಠಿಣವಾಗಿತ್ತು. ಅಷ್ಟಾದರೂ ಸಿಬ್ಬಂದಿ, ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಣ್ಣ ಜಾಗದಲ್ಲೇ ಒಳನುಗ್ಗಿ ನಾಲ್ವರನ್ನು ರಕ್ಷಿಸಿದ್ದಾರೆ. ಅವರ ಪಕ್ಕದಲ್ಲೇ ಇದ್ದ ಶಂಭುಕುಮಾರ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು’ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜೆ.ಎಚ್. ರವಿಶಂಕರ್ ಹೇಳಿದರು. 

60 ಕುಟುಂಬಗಳ ಸ್ಥಳಾಂತರ: ಬೇಸ್‌ಮೆಂಟ್ ಕುಸಿದು ಬಿದ್ದಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಅಕ್ಕ–ಪಕ್ಕದಲ್ಲಿರುವ ಕಟ್ಟಡಗಳಿಗೂ ಧಕ್ಕೆ ಆಗಿದೆ. ಮುಂಜಾಗ್ರತಾ ಕ್ರಮವಾಗಿ 60 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.  ಆ ಪೈಕಿ ಕೆಲ ಕುಟುಂಬದವರು, ಮನೆ ಸಾಮಗ್ರಿಗಳನ್ನು ರಸ್ತೆಯಲ್ಲೇ ಇಟ್ಟುಕೊಂಡು ನಿಂತಿದ್ದ ದೃಶ್ಯಗಳು ಬುಧವಾರ ಕಂಡುಬಂದವು. 

‘ಸಾಯಿ ಆದಿ ಅಂಬಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 20 ಕುಟುಂಬಗಳು ವಾಸವಿದ್ದವು. ಅದೇ ಕಟ್ಟಡದ ಬೇಸ್‌ಮೆಂಟ್ ಕುಸಿದು, ಇಡೀ ಕಟ್ಟಡವೇ ಅಲುಗಾಡಿತ್ತು. ಗಾಬರಿಗೊಂಡ ನಿವಾಸಿಗಳು, ತಡರಾತ್ರಿಯೇ ಕಿಟಕಿ ಮೂಲಕ ಹೊರಗೆ ಬಂದಿದ್ದಾರೆ.

ಎಂಜಿನಿಯರ್, ಮಾಲೀಕನ ವಿರುದ್ಧ ಎಫ್‌ಐಆರ್‌

ನಿರ್ಮಾಣ ಹಂತದ ಕಟ್ಟಡದ ಮಾಲೀಕ ಹಾಗೂ ಬಿಬಿಎಂಪಿ ಎಂಜಿನಿಯರ್ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತರ ಸಂಬಂಧಿಕರು ನೀಡಿರುವ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಂಜಿನಿಯರ್ ಹಾಗೂ ಮಾಲೀಕ ಎಂದಷ್ಟೇ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಮಾಲೀಕ ಯಾರು ಎಂಬುದನ್ನು ಪತ್ತೆ ಮಾಡಲು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಜೌಗು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ’

‘ನಿರ್ಮಾಣ ಹಂತದ ಕಟ್ಟಡವಿದ್ದ ಜಾಗ ಜೌಗು ಪ್ರದೇಶವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಟ್ಟಡ ಮಾಲೀಕರು, ಅನಧಿಕೃವಾಗಿ ಒಂದು ಅಂತಸ್ತನ್ನು ಹೆಚ್ಚಾಗಿ ಕಟ್ಟಿದ್ದರಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದುರಂತದಲ್ಲಿ ಮೃತಪಟ್ಟವರಿಗೆ ಬಿಬಿಎಂಪಿಯಿಂದ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಆ ಹಣವನ್ನು ಕಟ್ಟಡ ಮಾಲೀಕನಿಂದಲೇ ವಸೂಲಿ ಮಾಡಲಾಗುವುದು’ ಎಂದು ತಿಳಿಸಿದರು.

‘ನೆಲಮಹಡಿ ಸೇರಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ನಾಲ್ಕು ಮಹಡಿ ಕಟ್ಟಲಾಗಿದೆ. ಅಡಿಪಾಯದ ಗುಣಮಟ್ಟ ಸಹ ಕಳಪೆಯಾಗಿರುವುದು ಗೊತ್ತಾಗಿದೆ. ಕಟ್ಟಡ ಮಾಲೀಕರು ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟ ಎಂಜಿನಿಯರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು