ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಆದ್ಯತಾ ಪಥದಲ್ಲಿ ಪ್ರಯಾಣ: ಸರಾಸರಿ 7 ನಿಮಿಷ ಉಳಿತಾಯ

ಬಸ್‌ ಆದ್ಯತಾ ಪಥದಲ್ಲಿ ಪ್ರಯಾಣ: ಬೆಳಿಗ್ಗೆ ಹೊತ್ತು ಭಾರಿ ಅನುಕೂಲ
Last Updated 26 ನವೆಂಬರ್ 2019, 2:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವರ್ತುಲ ರಸ್ತೆಯಲ್ಲಿ ಬಸ್‌ ಆದ್ಯತಾ ಪಥ ಜಾರಿಗೆ ಬಂದ ಬಳಿಕ ಈ ಹಿಂದಿನ ಪ್ರಯಾಣದ ಅವಧಿಗೆ ಹೋಲಿಸಿದರೆ, ಪ್ರತಿ ಒಂದು ಗಂಟೆ ಪ್ರಯಾಣದಲ್ಲಿ ಸರಾಸರಿ 7 ನಿಮಿಷ ಉಳಿತಾಯವಾಗುತ್ತಿದೆ.

ಸಿಟಿಜನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ) ಸಂಘಟನೆಯವರು ಬಸ್‌ ಆದ್ಯತಾ ಪಥದ ಬಸ್‌ ಪ್ರಯಾಣಿಕರ ಅನಿಸಿಕೆಗಳನ್ನು ಆಧರಿಸಿ ನಡೆಸಿರುವ ಸಮೀಕ್ಷೆಯು, ಈ ಕ್ರಮದಿಂದ ಪ್ರಯಾಣಿಕರಿಗೆ ಆಗಿರುವ ಅನುಕೂಲಗಳ ಬಗ್ಗೆ ಬೆಳಕು ಚೆಲ್ಲಿದೆ. ಈ ಹೊಸ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಕುರಿತು ಸಿಎಫ್‌ಬಿ ಹಲವು ಸಲಹೆಗಳನ್ನು ನೀಡಿದೆ.

ಸಿಎಫ್‌ಬಿಯು ನ.19ರಿಂದ 24 ರವರೆಗೆ ಪ್ರಯಾಣಿಕರಿಂದ ಆನ್‌ಲೈನ್‌ ಮೂಲಕ ಅಭಿಪ್ರಾಯ ಸಂಗ್ರಹಿಸಿತ್ತು. ಒಟ್ಟು 112 ಮಂದಿ ಪ್ರತಿಕ್ರಿಯೆ ನೀಡಿದ್ದರು.

ಬೆಳಿಗ್ಗೆ ಹೊತ್ತು ಹೆಚ್ಚು ಅನುಕೂಲ

ಅಭಿಪ್ರಾಯ ನೀಡಿದವರಲ್ಲಿ ಬಹುತೇಕ ಮಂದಿ, ಬಸ್‌ ಆದ್ಯತಾ ಪಥದಿಂದಾಗಿ ಸಂಜೆಗಿಂತಲೂ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಅನುಕೂಲ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಥದಲ್ಲಿ ಸಂಚಾರಕ್ಕೆ ಸಂಬಂಧಿ ಮಾಹಿತಿ ಫಲಕಗಳ (ಸೈನೇಜ್‌) ಅಳವಡಿಕೆಯಲ್ಲಿ ಇನ್ನಷ್ಟು ಸುಧಾರಣೆ ಆಗಬೇಕು ಎಂಬುದೂ ಸೇರಿದಂತೆ ಅನೇಕ ಸಲಹೆಗಳನ್ನು ಪ್ರಯಾಣಿಕರು ನೀಡಿದ್ದಾರೆ.

‘ಒಆರ್‌ಆರ್‌ನಲ್ಲಿ ಆರಂಭಿಸಿದ ಬಸ್‌ ಆದ್ಯತಾ ಪಥ ಹೇಗೆ ಕಾರ್ಯನಿರ್ವಹಿಸುತ್ತಿದೆ, ಹೊಸ ವ್ಯವಸ್ಥೆ ಶುರುವಾದ ಬಳಿಕ ವಾಹನ ಸಂಚಾರದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಕಂಡುಕೊಳ್ಳುವ ಸಲುವಾಗಿ ಈ ಸಮೀಕ್ಷೆ ನಡೆಸಿದ್ದೇವೆ’ ಎಂದು ಸಿಎಫ್‌ಬಿ ಸಹಸಂಸ್ಥಾಪಕ ಶ್ರೀನಿವಾಸ ಅಲವಿಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯಾಣಿಕರು ಈ ಹೊಸ ವ್ಯವಸ್ಥೆಯನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಕಂಡುಕೊಂಡು, ಇನ್ನಷ್ಟು ಸುಧಾರಣೆ ತರಲು ಬಿಬಿಎಂಪಿ, ಬಿಎಂಟಿಸಿ, ಸಂಚಾರ ಪೊಲೀಸರು ಹಾಗೂ ನಗರ ಭೂಸಾರಿಗೆ
ನಿರ್ದೇಶನಾಲಯಕ್ಕೆ(ಡಲ್ಟ್‌) ಸಲಹೆಗಳನ್ನು ನೀಡುವುದು ನಮ್ಮ ಉದ್ದೇಶ’ ಎಂದರು.

ಬಿಬಿಎಂಪಿಗೆ ಸಲಹೆಗಳು

* ಸೈನೇಜ್‌ಗಳು ಕನ್ನಡದಲ್ಲೂ ಇರಲಿ

* ಇನ್ನಷ್ಟು ಕಡೆ ಬಸ್‌ಗಾಗಿ ಮಾತ್ರ ಎಂಬ ಸೈನೇಜ್‌ ಅಳವಡಿಸಿ

* ಜಂಕ್ಷನ್‌ಗಳ ಬಳಿ ಫೈಬರ್‌ ಬೊಲ್ಲಾರ್ಡ್ಸ್‌ಗಳನ್ನಾದರೂ ಹಾಕಿ

* ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಮಾಹಿತಿ ಫಲಕ ಅಳವಡಿಸಿ, ಧ್ವನಿ ಸಂದೇಶ ನೀಡಿ

* ಬಸ್‌ ನಿಲ್ದಾಣದ ಬಳಿ ಏಕಕಾಲಕ್ಕೆ ಕನಿಷ್ಠ ಎರಡು ಬಸ್‌ ನಿಲುಗಡೆಗೆ ಬೇಕಾಗುವಷ್ಡು ಜಾಗ ಇರಲಿ

* ಬಸ್‌ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಿ

ಬಿಎಂಟಿಸಿಯವರೇ ಇವುಗಳನ್ನು ಸರಿಪಡಿಸಿ

* ಈಗಲೂ ಅನೇಕ ಬಸ್‌ ಚಾಲಕರು ಆದ್ಯತಾ ಪಥವನ್ನು ಬಳಸುತ್ತಿಲ್ಲ

* ಸಾರಥಿ ವಾಹನಗಳು ಕಾಣಸಿಗುತ್ತಿಲ್ಲ

* ಹೆಚ್ಚು ಪ್ರಯಾಣಿಕರು ಬರಲಿ ಎಂದು ನಿಲ್ದಾಣಗಳಲ್ಲಿ ಬಸ್‌ಗಳನ್ನು ತುಂಬಾ ಹೊತ್ತು ನಿಲ್ಲಿಸುವುದು ತರವಲ್ಲ

ಸಂಚಾರ ಪೊಲೀಸರೇ ಇತ್ತ ಗಮನಿಸಿ

* ಬಸ್‌ ಆದ್ಯತಾ ಪಥ ವ್ಯವಸ್ಥೆ ಕಟ್ಟುನಿಟ್ಟಾಗಿ ಅನುಷ್ಠಾನವಾಗುತ್ತಿಲ್ಲ

* ಆದ್ಯತಾ ಪಥದಲ್ಲಿ ಚಲಿಸುವ ಖಾಸಗಿ ವಾಹನಗಳಿಗೆ ದಂಡ ವಿಧಿಸುತ್ತಿಲ್ಲ

* ಬಸ್‌ನಿಲ್ದಾಣಗಳ ಬಳಿ ಅಕ್ರಮವಾಗಿ ವಾಹನ ನಿಲುಗಡೆಯಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ

* ಸರ್ವಿಸ್‌ ರಸ್ತೆಗಳಲ್ಲಿ ಖಾಸಗಿ ವೋಲ್ವೊಗಳನ್ನು ಹಾಗೂ ಕ್ಯಾಬ್‌ಗಳನ್ನು ದಿನವಿಡೀ ನಿಲ್ಲಿಸಲಾಗುತ್ತಿದೆ

ಡಲ್ಟ್‌ಗೆ ಒಂದಿಷ್ಟು ಕಿವಿಮಾತು

* ವೈಜ್ಞಾನಿಕ ಸೈನೇಜ್‌ ವ್ಯವಸ್ಥೆ ಇಲ್ಲದಿರುವುದು ಗಂಭೀರ ವಿಚಾರ

* ಜಂಕ್ಷನ್‌ಗಳ ಬಳಿ ವಾಹನ ಸಂಚಾರ ಸುಗಮಗೊಳಿಸಲು ಪರಿಹಾರ ಕಂಡುಕೊಳ್ಳಬೇಕು

* ಕೆಲವೆಡೆ ಫೈಬರ್ ಬೊಲ್ಲಾರ್ಡ್ಸ್‌ಗಳು ಹಾಗೂ ಪಥ ವಿಭಜಕಗಳ ಅಗತ್ಯವಿದೆ

* ಸರ್ವಿಸ್‌ ರಸ್ತೆ ಮುಖ್ಯರಸ್ತೆಯನ್ನು ಸೇರುವ ಕಡೆ ಲೋಪಗಳಿವೆ

* ಪಾದಚಾರಿಗಳಿಗೆ ಅನುಕೂಲಕರವಾಗುವಂತೆ ಬಸ್‌ ಬೇಗಳನ್ನು ವಿನ್ಯಾಸಗೊಳಿಸಬೇಕು

* ಮಾರ್ಗದುದ್ದಕ್ಕೂ ಲಂಬ ಮಾಹಿತಿ ಫಲಕಗಳ ಕೊರತೆ ಇದೆ

* ಮಾಹಿತಿ ಫಲಕಗಳನ್ನು ಅಳವಡಿಸುವ ಸ್ಥಳವನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಬೇಕು

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT