ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ’

ಜಲಮಂಡಳಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
Last Updated 16 ಮಾರ್ಚ್ 2022, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಲ ಮಂಡಳಿ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಜಲಮಂಡಳಿಯ ಕೇಂದ್ರ ಕಚೇರಿ ಎದುರು ‌ಬುಧವಾರ ಸೇರಿದ್ದ ನೂರಾರು ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಜನರಿಗೆ ನೀರುಣಿಸುವ ನಮ್ಮ ಬದುಕು ನೀರು ಪಾಲಾಗದಿರಲಿ’ ಎಂಬ ಘೋಷಣೆ ಕೂಗಿದರು.

‘ವಾಲ್‌ ಮ್ಯಾನ್‌, ಚಾಲಕರು, ನೀರುಗಂಟಿ, ಎಟಿಎಂ ಹಾಗೂ ದೂರವಾಣಿ ಆಪರೇಟರ್‌ಗಳು, ಪಂಪ್‌ಹೌಸ್‌ ಆಪರೇಟರ್‌ಗಳು ಹಾಗೂ ಇತರೆ ಸಿಬ್ಬಂದಿ ಹಗಲಿರುಳೆನ್ನದೆ ದುಡಿಯುತ್ತಿರುವುದರಿಂದ ಬೆಂಗಳೂರಿನ ನಿವಾಸಿಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹೀಗಿದ್ದರೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಅಧಿಕಾರಿಗಳ ದರ್ಪದ ವಿರುದ್ಧ ಧ್ವನಿ ಎತ್ತುವವರನ್ನು ಏಕಾಏಕಿ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಕೋವಿಡ್‌ ಸಮಯದಲ್ಲಿ ನಾವೆಲ್ಲಾ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಇದನ್ನು ರಾಜ್ಯ ಸರ್ಕಾರ ಹಾಗೂ ಜಲಮಂಡಳಿ ಗುರುತಿಸಲಿಲ್ಲ. ಕಾಯಂ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಲಾಗುತ್ತದೆ. ಗುರುತಿನ ಚೀಟಿ ವಿತರಿಸಲಾಗಿದೆ. ವಾರದ ರಜೆ ಹಾಗೂ ಬೋನಸ್‌ ಕೂಡ ಸಿಗುತ್ತಿದೆ. ನಮ್ಮ ಪಾಲಿಗೆ ಇವೆಲ್ಲಾ ಕನಸಾಗಿಯೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಯಂ ನೌಕರರಂತೆ ಗುತ್ತಿಗೆ ಕಾರ್ಮಿಕರಿಗೂ ವಾರದ ರಜೆ ಹಾಗೂ ಸರ್ಕಾರಿ ರಜೆಗಳನ್ನು ಕಡ್ಡಾಯವಾಗಿ ನೀಡಬೇಕು. ಕೆಲಸದ ಅವಧಿಯನ್ನು 8 ಗಂಟೆಗೆ ನಿಗದಿಪಡಿಸಬೇಕು. ಹೆಚ್ಚುವರಿ ಅವಧಿ ಕೆಲಸ ಮಾಡಿದವರಿಗೆ ಅಗತ್ಯ ಭತ್ಯೆ ಒದಗಿಸಬೇಕು. ಜಲ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆಬಿಬಿಎಂಪಿ ಮಾದರಿಯಲ್ಲೇ ನೇರ ವೇತನ ಪಾವತಿಸಬೇಕು. ಜೊತೆಗೆ ಗುರುತಿನ ಚೀಟಿಗಳನ್ನೂ ವಿತರಿಸಬೇಕು’ ಎಂದು ಆಗ್ರಹಿಸಿದರು.

‘ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು. ಬೋನಸ್‌ ಕೂಡ ನೀಡಬೇಕು. ಆಡಳಿತ ವರ್ಗದವರು ಕಾರ್ಮಿಕರೊಂದಿಗೆ ಘನತೆಯಿಂದ ವರ್ತಿಸಬೇಕು. ದೌರ್ಜನ್ಯ ನಡೆಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘15 ದಿನಗಳಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಬಾಲನ್‌, ರವಿಮೋಹನ್‌, ನಟಚೇತನ್‌ ಅಹಿಂಸಾ ಹಾಗೂ ಸತೀಶ್‌ ಅರವಿಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT