ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಹಂಚಿಕೊಂಡರೆ ಸಾರಿಗೆ ಇಲಾಖೆಗೇಕೆ ಕೋಪ

ವಾಣಿಜ್ಯ ಬಳಕೆ ನೆಪ: ಕಾರು ಪೂಲಿಂಗ್‌ ಸೇವೆಗೆ ನಿರ್ಬಂಧ
Last Updated 30 ಜೂನ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಾನ ನಗರಿ’, ‘ಸಿಲಿಕಾನ್ ಸಿಟಿ’ ಖ್ಯಾತಿಯ ಬೆಂಗಳೂರು, ಇದೀಗ ಸಂಚಾರ ದಟ್ಟಣೆ ನಗರವಾಗಿ ಮಾರ್ಪಟ್ಟಿದೆ. ನಿತ್ಯವೂ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಹೈರಾಣಾಗಬೇಕಾದ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಓಲಾ ಕಂಪನಿಯ ‘ಶೇರ್’ ಹಾಗೂ ಉಬರ್ ಕಂಪನಿಯ ‘ಪೂಲ್’ ಸೇವೆಗಳಿಂದಾಗಿ ಖಾಸಗಿ ಕಾರುಗಳು ರಸ್ತೆಗಿಳಿಯುವ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಈ ಸೇವೆಗಳಿಗೆ ಏಕಾಏಕಿ ನಿರ್ಬಂಧ ಹೇರಿರುವ ಸಾರಿಗೆ ಇಲಾಖೆಯ ಕ್ರಮ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಕಾರ್‌ ಪೂಲಿಂಗ್‌’ ಸೇವೆ ಒದಗಿಸುವ ಕಂಪನಿಗಳು 'ರಾಜ್ಯ ಬೇಡಿಕೆ ಆಧಾರಿತ ವೆಬ್‌ ತಂತ್ರಜ್ಞಾನ, ಅಗ್ರಿಗೇಟರ್‌ ಕಾಯ್ದೆ-2016 ಅನ್ನು ಉಲ್ಲಂಘಿಸಿವೆ. ಹಾಗಾಗಿ ಇದನ್ನು ನಿರ್ಬಂಧಿಸಲಾಗಿದೆ’ ಎಂದು ಸಮಜಾಯಿಷಿ ನೀಡುತ್ತಾರೆ ಅಧಿಕಾರಿಗಳು.

‘ಕಾರ್‌ ಪೂಲಿಂಗ್‌ ನಿಷೇಧವನ್ನೇನೋ ಮಾಡಿದಿರಿ. ಆದರೆ, ಅದಕ್ಕೆ ಪರ್ಯಾಯವಾದ ಯಾವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಜನರ ಓಡಾಟಕ್ಕೆ ಅಗತ್ಯವಿರುವಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಗರದಲ್ಲಿ ಅಭಿವೃದ್ಧಿಯಾಗಿಲ್ಲ. ನಗರದ ಬಹುತೇಕ ಪ್ರದೇಶಗಳಿಗೆ ನಮ್ಮ ಮೆಟ್ರೊ ಸಂಪರ್ಕವಿಲ್ಲ. ಬಾಡಿಗೆ ಟ್ಯಾಕ್ಸಿಗಿಂತ ಕಡಿಮೆ ವೆಚ್ಚದ ಕಾರ್‌ ಪೂಲಿಂಗ್‌ ಸೇವೆ ಮಧ್ಯಮ ವರ್ಗದ ಜನರ ಪಾಲಿಗೆ ಆಕರ್ಷಣೀಯವಾಗಿತ್ತು. ಅನೇಕ ಮಂದಿ ಸ್ವಂತ ಕಾರಿನ ಬದಲು ಷೇರಿಂಗ್‌ ಮೊರೆ ಹೋಗಿದ್ದರು.

ಒಂದು ವಾಹನದಲ್ಲಿ ಮೂವರು ಅಥವಾ ನಾಲ್ವರು ಕುಳಿತುಕೊಂಡು ಸಂಚರಿಸಲು ಷೇರ್‌ ಹಾಗೂ ಪೂಲಿಂಗ್‌ ಅನುವು ಮಾಡಿಕೊಟ್ಟಿತ್ತು. ಸಾರಿಗೆ ಇಲಾಖೆ ಆರಂಭದಲ್ಲಿ ಸಹ ‘ಕಾರ್ ಪೂಲಿಂಗ್’ ವ್ಯವಸ್ಥೆಗೆ ಉತ್ತೇಜನ ನೀಡಿತ್ತು. ಈ ಕುರಿತು ಜನ ಜಾಗೃತಿಯನ್ನೂ ಮೂಡಿಸಿತ್ತು. ಇಲಾಖೆ ಈಗ ದಿಢೀರ್‌ ನಿಲುವು ಬದಲಾಯಿಸಿದೆ. ಇಲಾಖೆಯ ನಿಲುವನ್ನು ಅನೇಕರು ಖಂಡಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಪಂಕಜ್, ‘ಕಾರ್ ಪೂಲಿಂಗ್‌ ಸೇವೆಯಿಂದ ಹಣ ಹಾಗೂ ಸಮಯ ಎರಡೂ ಉಳಿಯುತ್ತದೆ. ಆ ಸೇವೆ ಬಳಸಿಕೊಂಡೇ ನಿತ್ಯ ಕಚೇರಿಗೆ ಹೋಗಿ ಬರುತ್ತಿದ್ದೆ. ಏಕಾಏಕಿ ಸೇವೆಯನ್ನು ರದ್ದುಪಡಿಸಿದ್ದು ಸರಿಯಲ್ಲ’ ಎಂದು ಟೀಕಿಸಿದರು.

‘ಕಾರು ಖರೀದಿಸುವಷ್ಟು ಆರ್ಥಿಕ ಸಾಮರ್ಥ್ಯ ನನಗಿದೆ. ನಗರದ ವಾಹನ ದಟ್ಟಣೆಯ ವಿಷಮ ಸ್ಥಿತಿ ಕಂಡು ದಂಗಾಗಿದ್ದೇನೆ. ಕಾರು ಖರೀದಿಸುವ ಬದಲು ಪೂಲಿಂಗ್ ಸೇವೆ ಒಳ್ಳೆಯದು ಎನಿಸಿದೆ. ಇದನ್ನು ನಿರ್ಬಂಧಿಸುವ ಮುನ್ನ ಅಧಿಕಾರಿಗಳು ನನ್ನಂತಹ ಪ್ರಯಾಣಿಕರ ಅಭಿಪ್ರಾಯ ಪಡೆಯಬೇಕಿತ್ತು. ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಅಗತ್ಯವಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದುಡಿಮೆ ಕಸಿಯುವ ಸೇವೆ: ಇಲಾಖೆ ನಿರ್ಧಾರವನ್ನು ಸ್ವಾಗತಿಸಿರುವ ‘ಓಲಾ, ಟ್ಯಾಕ್ಸಿ ಫಾರ್ ಶ್ಯೂರ್, ಉಬರ್ ಚಾಲಕರು ಮತ್ತು ಮಾಲೀಕದ ಸಂಘ’ದ ಅಧ್ಯಕ್ಷ ತನ್ವೀರ್ ಪಾಷ, ‘ತಮಗೆ ನೀಡಿರುವ ಪರವಾನಗಿಯ ನಿಯಮಗಳನ್ನು ಉಲ್ಲಂಘಿಸಿ ಓಲಾ ಹಾಗೂ ಉಬರ್ ಕಂಪನಿಗಳು ಕಾರ್ ಪೂಲಿಂಗ್ ಸೇವೆ ನೀಡುತ್ತಿವೆ. ಚಾಲಕರಿಗೆ ಅನುಕೂಲವಾಗುವ ರೀತಿಯಲ್ಲಿ ಆ ಸೇವೆಗಳಿಗೆ ಸೂಕ್ತ ನಿಯಮಾವಳಿ ರೂಪಿಸುವಂತೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಕೂಗಿಗೆ ಅಧಿಕಾರಿಗಳು ಈಗ ಸ್ಪಂದಿಸಿದ್ದಾರೆ’ ಎಂದರು.

‘ಚಾಲಕರು ಲಕ್ಷಾಂತರ ರೂಪಾಯಿ ಸಾಲ ಪಡೆದು ಕಾರು ಖರೀದಿಸುತ್ತಿದ್ದಾರೆ. ಕಾರ್ ಪೂಲಿಂಗ್ ಸೇವೆಯಿಂದ ಒಬ್ಬ ಚಾಲಕನಿಗೆ ಲಾಭವಾದರೆ, ಮೂವರು ಚಾಲಕರು ನಿರುದ್ಯೋಗಿಗಳಾಗುತ್ತಾರೆ. ಇದು ಟ್ಯಾಕ್ಸಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಚಾಲಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ’ ಎಂದು ದೂರಿದರು.

ಚಾಲಕ ಸಿದ್ದು, ‘ಒಂದು ಬಾರಿ ಮೂವರು ಪ್ರಯಾಣಿಕರನ್ನು ಹತ್ತಿಸಿಕೊಂಡು, ಅವರು ಹೇಳಿದ ಕಡೆ ಬಿಟ್ಟು ಬರುತ್ತೇವೆ. ಅದಕ್ಕೆ ಕನಿಷ್ಠ ಎರಡು ಗಂಟೆ ಬೇಕಾಗುತ್ತದೆ. ಒಬ್ಬರಿಂದ ತಲಾ ₹40 ರಿಂದ ₹90 ಸಿಗುತ್ತದೆ.ಪೂಲಿಂಗ್ ಸೇವೆಯಿಂದ ನಮಗೆ ಹೆಚ್ಚು ಸಂಪಾದನೆ ಆಗುವುದಿಲ್ಲ. ಖಾಲಿ ಇರುವ ವೇಳೆಯಲ್ಲಿ ಅನಿವಾರ್ಯವಾಗಿ ಉಬರ್ ಪೂಲ್ ಸೇವೆ ನೀಡುತ್ತೇವೆ’ ಎಂದರು.

ಟ್ಯಾಕ್ಸಿ ಚಾಲಕರ ವಾದವನ್ನು ರಾಜಾಜಿನಗರ ನಿವಾಸಿ ರಾಘವೇಂದ್ರ ಒಪ್ಪುವುದಿಲ್ಲ. ‘ಮಿತವ್ಯಯಕಾರಿ ಎಂಬ ಕಾರಣಕ್ಕೆ ಅನೇಕರು ಕಾರ್‌ ಪೂಲಿಂಗ್‌ ಸೇವೆ ಬಳಸುತ್ತಿದ್ದರು. ಎಷ್ಟು ದೂರ ಸಂಚರಿಸುತ್ತೇವೆ ಎಂಬ ಆಧಾರದಲ್ಲೇ ಚಾಲಕರಿಗೆ ಹಾಗೂ ಸೇವೆ ಒದಗಿಸುವ ಕಂಪನಿಗೆ ವರಮಾನ ಬರುತ್ತಿತ್ತು. ಪೂಲಿಂಗ್‌ ಸೇವೆ ನೀಡುವ ಕಾರಿನಲ್ಲಿ ಪ್ರಯಾಣಿಸುವಾಗ ಕಚೇರಿಯಿಂದ ಮನೆಗೆ ತಲುಪಲು ನಿತ್ಯ ₹ 100 ವೆಚ್ಚವಾಗುತ್ತಿತ್ತು. ನಾನೀಗ ಪ್ರತ್ಯೇಕವಾಗಿ ಟ್ಯಾಕ್ಸಿ ಮಾಡಿಕೊಂಡು ಹೋಗುವುದಾದರೆ ₹ 300 ವೆಚ್ಚವಾಗುತ್ತದೆ. ಅದರ ಬದಲು ಸ್ವಂತ ಕಾರು ಬಳಸಲು ವೆಚ್ಚ ಕಡಿಮೆಯಾಗುತ್ತದೆ. ಇನ್ನು ಮುಂದೆ ತೀರಾ ಅನಿವಾರ್ಯ ಇದ್ದವರು ಮಾತ್ರ ಟ್ಯಾಕ್ಸಿ ಬಳಸುತ್ತಾರೆ. ಈ ನಿರ್ಧಾರದಿಂದ ಟ್ಯಾಕ್ಸಿಗಳಿಗೆ ಬೇಡಿಕೆ ಕುಸಿಯುತ್ತದೆಯೇ ಹೊರತು ಹೆಚ್ಚುವುದಿಲ್ಲ’ ಎಂದು ಅವರು ತಿಳಿಸಿದರು.

‘ನಿಯಮ ಉಲ್ಲಂಘಿಸಿದ್ದಕ್ಕೆ ಕ್ರಮ’

‘ಕಾರ್‌ ಪೂಲಿಂಗ್‌ ಸೇವೆಯನ್ನುವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆ ಸೇವೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಕಂಪನಿಯ ಪ್ರತಿನಿಧಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ ಸ್ಪಷ್ಟಪಡಿಸಿದರು.

‘ಜನರಿಗೆ ತೊಂದರೆ ಉಂಟು ಮಾಡುವುದು ನಮ್ಮ ಉದ್ದೇಶವಲ್ಲ. ಮೊಬೈಲ್ ಆ್ಯಪ್ ಆಧರಿತ ಸಾರಿಗೆ ಸೇವೆ ಒದಗಿಸುತ್ತಿರುವ ಕಂಪನಿಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ 'ರಾಜ್ಯ ಬೇಡಿಕೆ ಆಧಾರಿತ ವೆಬ್‌ ತಂತ್ರಜ್ಞಾನ, ಅಗ್ರಿಗೇಟರ್‌ ಕಾಯ್ದೆ-2016’ ರೂಪಿಸಲಾಗಿದೆ. ಈ ಕಾಯ್ದೆಯಷರತ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿ ಓಲಾ ಹಾಗೂ ಉಬರ್ ಕಂಪನಿಗಳು ಪೂಲಿಂಗ್ ಸೇವೆ ನೀಡುತ್ತಿವೆ. ಹೀಗಾಗಿ ಈ ಕ್ರಮ ಜರುಗಿಸಲಾಗಿದೆ’ ಎಂದರು.

ನಿಷೇಧದ ಬಳಿಕವೂ ಸೇವೆ ನಿಲ್ಲಿಸದ ಕಂಪನಿ

ಶೇರ್ ಹಾಗೂ ಪೂಲಿಂಗ್‌ ಸೇವೆಗಳನ್ನು ನಿರ್ಬಂಧಿಸಿದ ಬಳಿಕವೂ ಓಲಾ ಮತ್ತು ಉಬರ್‌ ಕಂಪನಿಗಳು ಈ ಸೇವೆ ಮುಂದುವರಿಸಿವೆ.

ರಾಜಾಜಿನಗರದ ಚಾಲಕ ರಂಗರಾಜ್, ‘ಉಬರ್ ಪೂಲ್ ಸೇವೆ ರದ್ದುಪಡಿಸಿರುವ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೇನೆ. ಆದರೆ, ನಮ್ಮ ಆ್ಯಪ್‌ನಲ್ಲಿ ಇಂದಿಗೂ ಆ ಸೇವೆ ತೋರಿಸುತ್ತಿದೆ. ಭಾನುವಾರ ಮಧ್ಯಾಹ್ನವೂ ಕೆಲ ಪ್ರಯಾಣಿಕರಿಗೆ ಸೇವೆ ನೀಡಿದ್ದೇನೆ’ ಎಂದು ಹೇಳಿದರು.

ಸಾರ್ವಜನಿಕ ಸಾರಿಗೆ ಬಲಪಡಿಸಿ

‘ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರದ ಜನರ ಸಂಚಾರಕ್ಕಾಗಿ ಮೊದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು. ನಂತರ ಬೇಕಿದ್ದರೆ, ‘ಕಾರ್ ಪೂಲಿಂಗ್’ ನಿರ್ಬಂಧಿಸುವ ಕ್ರಮಗಳನ್ನು ಕೈಗೊಳ್ಳಲಿ’ ಎಂದು ಸಿಟಿಜನ್ ಫಾರ್ ಬೆಂಗಳೂರು ಸಹಸಂಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ ಅಭಿಪ್ರಾಯಪಟ್ಟರು.

‘ಸದ್ಯ ಮೂವರು ಪ್ರಯಾಣಿಕರು, ‘ಕಾರ್ ಪೂಲಿಂಗ್’ ಸೇವೆ ಮೂಲಕ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈಗ ಪ್ರತಿಯೊಬ್ಬರು ಒಂದೊಂದು ಕಾರಿನಲ್ಲಿ ಹೋಗಬೇಕಾಗುತ್ತದೆ. ಇದರಿಂದ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಇದರ ಬದಲು, ಬಸ್‌ಗಳ ಸಂಖ್ಯೆ ಹೆಚ್ಚಿಸಿ ಪ್ರಯಾಣ ದರವನ್ನೂ ಅರ್ಧದಷ್ಟು ಕಡಿಮೆ ಮಾಡಬೇಕು. ಉಪನಗರ ರೈಲು ಯೋಜನೆ ಜಾರಿಗೊಳಿಸಬೇಕು. ಆಗ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ತನ್ನಿಂದ ತಾನೆ ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ಅಧಿಕಾರಿಗಳು ಜನರ ಜೊತೆ ಓಡಾಡಲಿ’

‘ಎ.ಸಿ ಕಾರಿನಲ್ಲಿ ಓಡಾಡಿ, ಕಚೇರಿಯಲ್ಲೇ ಕುಳಿತು ನಿಯಮ ರೂಪಿಸುವವರಿಗೆ ಜನರ ಕಷ್ಟ ಅರ್ಥವಾಗದು. ಇದಕ್ಕೆ ‘ಕಾರ್ ಪೂಲಿಂಗ್’ ನಿರ್ಬಂಧಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಸಾರಿಗೆ ಅಧಿಕಾರಿಗಳು, ಜನರ ಜೊತೆ ದಟ್ಟಣೆಯಲ್ಲಿ ಸಂಚರಿಸಿದಾಗ ಮಾತ್ರ ಅವರಿಗೆ ಸಮಸ್ಯೆ ಅರ್ಥವಾಗುತ್ತದೆ’ ಎಂದು ವಿದ್ಯಾರ್ಥಿ ಆಕಾಶ್ ಸಿಂಗ್ ಅಭಿಪ್ರಾಯಪಟ್ಟರು.

ಮತ್ತಷ್ಟು ಹೆಚ್ಚಲಿದೆ ದಟ್ಟಣೆ

ನಗರದಲ್ಲಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ದಿನವೊಂದಕ್ಕೆ ಸರಾಸರಿ ಎರಡು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಐವರು ಪ್ರಯಾಣಿಸಬಹುದಾದ ಕಾರಿನಲ್ಲಿ ಒಬ್ಬರೇ ಓಡಾಡುವುದೂ ಹೆಚ್ಚಾಗುತ್ತದೆ. ಈ ಪ್ರವೃತ್ತಿ ಸಂಚಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತಾಗಲು ಕಾರಣವಾಗುತ್ತಿದೆ. ಪೂಲಿಂಗ್‌ ನಿಷೇಧದಿಂದ ಅನೇಕರು ಮತ್ತೆ ಖಾಸಗಿ ಕಾರನ್ನು ಬಳಸಲು ಆರಂಭಿಸುತ್ತಾರೆ. ಇದರಿಂದ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

‘ಕಾರ್‌ ಪೂಲಿಂಗ್’ ರದ್ದು; ಟ್ವಿಟರ್‌ನಲ್ಲಿ ಕಂಡಿದ್ದು (ಟ್ವಿಟರ್ ಲೋಗೊ ಬಳಸಿ)

ಕುದುರೆ, ಎತ್ತಿನಗಾಡಿ ಖರೀದಿಗೆ ಸಬ್ಸಿಡಿ:

ಎ.ಸಿ ವೋಲ್ವೊ ಬಸ್ ರದ್ದು. ಈಗ ಓಲಾ ಹಾಗೂ ಉಬರ್ ಪೂಲಿಂಗ್ ಸಹ ರದ್ದು. ರಾಜ್ಯ ಸರ್ಕಾರ, ಮುಂದಿನ ದಿನಗಳಲ್ಲಿ ‘ಹಸಿರು ಬೆಂಗಳೂರು’ ನಿರ್ಮಿಸುವ ಪಣ ತೊಟ್ಟಂತೆ ಕಾಣುತ್ತಿದೆ. ಅದು ನಿಜವೇ ಆಗಿದ್ದರೆ, ಕೆಲವೇ ದಿನಗಳಲ್ಲಿ ಕುದುರೆ ಹಾಗೂ ಎತ್ತಿನ ಗಾಡಿ ಖರೀದಿಸಲು ಸರ್ಕಾರವೇ ಸಬ್ಸಿಡಿ ಸಹಿತ ಸಾಲ ನೀಡಿದರೂ ಆಶ್ಚರ್ಯವಿಲ್ಲ.

– ಗೌರವ್ ಗುಪ್ತಾ

––––

ಇನ್ನಾದರೂ ಎಚ್ಚರವಾಗಿ

ಚುನಾವಣೆಯಲ್ಲಿ ಕಡಿಮೆ ಮತದಾನ ಮಾಡಿದ ಬೆಂಗಳೂರಿಗರು ಪಶ್ಚಾತಾಪ ಪಡಲೇ ಬೇಕು. ‘ನೋ ವೊಲ್ವೊ’, ‘ನೋ ಟ್ಯಾಕ್ಸಿ ಪೂಲಿಂಗ್’ ಎಂಬ ಸ್ಥಿತಿ ಈಗ ಬಂದೊದಗಿದೆ. ಬೆಂಗಳೂರಿಗರೇ ಇನ್ನಾದರೂ ಎಚ್ಚರವಾಗಿ

– ಮಧು

––

ಆಘಾತಕಾರಿ ಸಂಗತಿ:

‘ಕಾರ್ ಪೂಲಿಂಗ್’ ಸೇವೆಯನ್ನು ಹೆಚ್ಚೆಚ್ಚು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸರ್ಕಾರವೇ, ಇದೀಗ ಈ ಸೇವೆಯನ್ನೇ ರದ್ದು ಮಾಡಲು ಹೊರಟಿರುವುದು ಆಘಾತಕಾರಿ ಸಂಗತಿ

– ಸುರಮ್ಯಾ ತೋಮರ್


80,49,891

ಬೆಂಗಳೂರಿನಲ್ಲಿ ನೋಂದಣಿಯಾದ ವಾಹನಗಳು

1,57,250

ಬೆಂಗಳೂರಿನಲ್ಲಿರುವ ಟ್ಯಾಕ್ಸಿಗಳು


65 ಸಾವಿರ

ಓಲಾ ಮತ್ತು ಉಬರ್ ಕಂಪನಿಗಳಲ್ಲಿ ನೋಂದಣಿಯಾದ ಕ್ಯಾಬ್‌ಗಳು

––––

ಬೆಂಗಳೂರಿನಲ್ಲಿರುವ ವಾಹನಗಳ ಸಂಖ್ಯೆ

ಬೈಕ್‌;55,88,029

ಕಾರು;15,41,017

ಶಾಲಾ ವಾಹನ;12,352

ಟ್ರಕ್‌/ಲಾರಿ; 65,151

(ವಾಟ್ಸ್‌ಆ್ಯಪ್) ಪ್ರತಿಕ್ರಿಯಿಸಿ: 95133–22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT