ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ವಿಷದ ಬಟ್ಟಲು: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ

ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ
Published 8 ಡಿಸೆಂಬರ್ 2023, 18:38 IST
Last Updated 8 ಡಿಸೆಂಬರ್ 2023, 18:38 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತಿಗಳನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಸಾಹಿತ್ಯದಿಂದಲೇ ಸಾಹಿತಿಗಳು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಪರಿಷತ್ತು ಎಲ್ಲರನ್ನು ಗೌರವಿಸುವ ಮೂಲಕ ಸಾಹಿತ್ಯಕ್ಕೆ ಸಾಹಿತ್ಯವೇ ಸಾಟಿ ಎನ್ನುವ ತತ್ವವನ್ನು ಹೊಂದಿದೆ’ ಎಂದರು.

‘ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದೇ ಗುರುತಿಸಿದ್ದರು. ದಲಿತ ಪರ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯವನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದರು’ ಎಂದು ಹೇಳಿದರು.

‘ಸಿದ್ದಲಿಂಗಯ್ಯ ಅವರು ಸಮಾಜದಲ್ಲಿರುವ ಮೌಢ್ಯವನ್ನು ದೂರ ಮಾಡುವುದರ ಜೊತೆಗೆ ಜೀವನದ ವಾಸ್ತವಿಕತೆಯನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟವರು’ ಎಂದು ಹೇಳಿದರು.

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯದ ಮೂಲಕ ದಲಿತ ದಮನಿತರ ಧ್ವನಿಯಾದವರು. ಸಾಹಿತ್ಯ, ಸಂಗೀತ, ಹೋರಾಟ ಎಲ್ಲದರಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರಯೋಗಶಾಲಿ ಕವಿ ಆಗಿದ್ದರು. ಸರಳತೆ ಅವರ ಶಕ್ತಿಯಾಗಿತ್ತು’ ಎಂದರು.

‘ಜಾತಿ ಎನ್ನುವುದು ನಮ್ಮಲ್ಲಿ ಸಾಂಸ್ಕೃತಿಕ ಅಸ್ಮಿತೆಯಾಗಿದೆ. ಇದು ಅಳಿಯುವರೆಗೂ ಸಾಹಿತ್ಯದಲ್ಲಿ ಕೂಡ ಪ್ರತ್ಯೇಕತೆ ಅನಿವಾರ್ಯವಾಗುತ್ತದೆ. ಜಾತಿ ಪದ್ಧತಿ ಎನ್ನುವುದು ಬರಿ ಭೂತವಲ್ಲ ಬದಲಿಗೆ ವಿಷದ ಬಟ್ಟಲು’ ಎಂದು ಹೇಳಿದರು.

ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸಾ ಮಾತನಾಡಿದರು. ರಮಾಕುಮಾರಿ ಸಿದ್ದಲಿಂಗಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT