ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರುಡಾದ್ರಿ ಇನ್ಫ್ರಾ ಪ್ರಾಜೆಕ್ಟ್’ ಪಾಲುದಾರ ಬಂಧನ

ನಿವೇಶನ ಆಮಿಷವೊಡ್ಡಿ ವಂಚನೆ * ಯಾರದ್ದೋ ಜಾಗ ತೋರಿಸುತ್ತಿದ್ದ ಆರೋಪಿಗಳು
Last Updated 8 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಯಾರದ್ದೋ ಖಾಲಿ ಜಾಗದಲ್ಲಿ ಬೋರ್ಡ್ ನೇತು ಹಾಕಿ ಅಲ್ಲಿಯೇ ನಿವೇಶನ ನೀಡುವುದಾಗಿ ಹೇಳಿ ಕೆಲ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪದಡಿ‘ಗರುಡಾದ್ರಿ ಇನ್ಫ್ರಾ ಪ್ರಾಜೆಕ್ಟ್’ ರಿಯಲ್ ಎಸ್ಟೇಟ್ ಸಂಸ್ಥೆಯ ಪಾಲುದಾರ ಎಂ. ಮಧು ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸಾರ್ವಜನಿಕರೊಬ್ಬರು ನೀಡಿದ್ದ ದೂರಿನನ್ವಯಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಕೇಶವಮೂರ್ತಿ ನೇತೃತ್ವದ ತಂಡ ನಾಗರಬಾವಿಯ 2ನೇ ಹಂತದ ಮಾಳಗಾಳದಲ್ಲಿರುವ ಸಂಸ್ಥೆಯ ಕಚೇರಿ ಮೇಲೆ ಶನಿವಾರ ದಾಳಿ ನಡೆಸಿತ್ತು. ಕೆಲ ದಾಖಲೆಗಳನ್ನು ಜಪ್ತಿ ಮಾಡಿ ಆರೋಪಿ ಮಧು ಅವರನ್ನು ಬಂಧಿಸಿದೆ. ಪಾಲುದಾರರಾದ ಕುಮಾರ್, ಯಶಸ್ ಹಾಗೂ ಆಕಾಶ್ ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

10 ಎಕರೆ ಲೇಔಟ್‌ ಆಮಿಷ; ‘ಚಿಕ್ಕಬಳ್ಳಾಪುರದಲ್ಲಿ 100 ಎಕರೆ ಲೇಔಟ್‌ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಗಳು ಜಾಹೀರಾತು ನೀಡಿದ್ದರು.ಸಂಸ್ಥೆಗೆ ಸೇರಿದ್ದ ಯಾವುದೇ ಜಾಗ ಅಲ್ಲಿ ಇರಲಿಲ್ಲ. ಆರೋಪಿಗಳು ಯಾರದ್ದೋ ಖಾಲಿ ಜಾಗದಲ್ಲಿ ತಮ್ಮ ಸಂಸ್ಥೆಯ ಬೋರ್ಡ್‌ ನೇತು ಹಾಕಿದ್ದರು’ ಎಂದು ಅಧಿಕಾರಿ ಹೇಳಿದರು.

‘ಜಾಗಕ್ಕೆ ಗ್ರಾಹಕರನ್ನು ಕರೆದೊಯ್ಯುತ್ತಿದ್ದ ಆರೋಪಿಗಳು, ಅದೇ ಜಾಗದಲ್ಲಿ ಲೇಔಟ್‌ ನಿರ್ಮಿಸುತ್ತಿರುವುದಾಗಿ ಹೇಳುತ್ತಿದ್ದರು. ಅದನ್ನು ನಂಬಿದ್ದ 20ಕ್ಕೂ ಹೆಚ್ಚು ಮಂದಿ ನಿವೇಶನ ಕಾಯ್ದಿರಿಸಿ ಲಕ್ಷಾಂತರ ರೂಪಾಯಿ ಮುಂಗಡವಾಗಿ ಕೊಟ್ಟಿದ್ದಾರೆ. ಅವರೆಲ್ಲರನ್ನೂ ಸಂಪರ್ಕಿಸಿ ಹೇಳಿಕೆ ಪಡೆಯಬೇಕಿದೆ’ ಎಂದರು.

‘ಯಾವುದೇ ಇಲಾಖೆಯಿಂದಲೂ ಅನುಮತಿ ಪಡೆಯದೇ ಗರುಡಾದ್ರಿ ಇನ್ಫ್ರಾ ಪ್ರಾಜೆಕ್ಟ್ ರಿಯಲ್ ಎಸ್ಟೇಟ್ ಸಂಸ್ಥೆ ತೆರೆಯಲಾಗಿದೆ. ಇದರ ಹೆಸರಿನಲ್ಲೇ ಜಾಹೀರಾತುಗಳನ್ನು ನೀಡಿ ಜನರನ್ನು ವಂಚಿಸಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಆಂಧ್ರಪ್ರದೇಶದ ಪೆನುಕೊಂಡ ಬಳಿಯೂ ಖಾಲಿ ಜಾಗವೊಂದನ್ನು ತೋರಿಸಿ ಗ್ರಾಹಕರನ್ನು ವಂಚಿಸಿರುವ ಮಾಹಿತಿ ಇದೆ. ಆ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT