ಸೋಮವಾರ, ಮೇ 17, 2021
28 °C
ಸಿಸಿಬಿ ಕಾರ್ಯಾಚರಣೆ; ನೈಜೀರಿಯನ್ ಸೇರಿ ನಾಲ್ವರ ಬಂಧನ

₹ 20 ಲಕ್ಷ ಮೌಲ್ಯದ ಡ್ರಗ್ಸ್, ಆಯುಧ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ವ್ಯವಸ್ಥಿತವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಗಳು ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಅಜ್ಹಾ ಫ್ರಾನ್ಸಿಸ್ ಒಬಸಿ (34), ಚಾರ್ಲಿಸ್ ಚಿಮಾ (29), ಕೇರಳದ ಜಸಿರ್ ಥನಿಚೇರಿ ಕಂಡಯ್ (33) ಹಾಗೂ ಬೆಂಗಳೂರಿನ ಮಾಲಂಗ್ ಪಾಷಾ (30) ಬಂಧಿತರು. ಅವರಿಂದ ₹ 20 ಲಕ್ಷ ಮೌಲ್ಯದ ಡ್ರಗ್ಸ್ ಹಾಗೂ ಆಯುಧಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲ ಖಾಸಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕೆಲ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. ಜೊತೆಯಲ್ಲೇ ಆರೋಪಿಗಳು, ಆಯುಧ ಇಟ್ಟುಕೊಂಡು ಓಡಾಡುತ್ತಿದ್ದರು. ಇದನ್ನು ಬಳಸಿ ಅಪರಾಧ ಕೃತ್ಯಗಳನ್ನು ಎಸಗಿರುವ ಅನುಮಾನವಿದೆ’ ಎಂದೂ ತಿಳಿಸಿದರು.

‘ಬಾಗಲೂರು ಠಾಣೆ ವ್ಯಾಪ್ತಿಯ ಶಾಲೆಯೊಂದರ ಬಳಿ ಏಪ್ರಿಲ್ 13ರಂದು ಸುತ್ತಾಡುತ್ತಿದ್ದ ಆರೋಪಿಗಳು, ಪರಿಚಯಸ್ಥ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡಲು ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದೂ ಹೇಳಿದರು.

‘200 ಗ್ರಾಂ ತೂಕದ ಎಕ್ಸ್‌ಟೆಸ್ಸಿ ಮಾತ್ರೆಗಳು ಹಾಗೂ 153 ಗ್ರಾಂ ಎಂಡಿಎಂಎ ಆರೋಪಿಗಳ ಬಳಿ ಸಿಕ್ಕಿವೆ. ಅವರ 5 ಮೊಬೈಲ್, 2 ದ್ವಿಚಕ್ರ ವಾಹನ ಹಾಗೂ ₹ 4,000 ನಗದನ್ನು ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.