ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೇಷಾದ್ರಿಪುರ ಕಾಲೇಜಿನಲ್ಲಿ ‘ಎಸ್‌ಎಫ್‌ಜಿಸಿ ಉತ್ಸವ‘ದ ಸಂಭ್ರಮ

Published 16 ಜೂನ್ 2024, 14:48 IST
Last Updated 16 ಜೂನ್ 2024, 14:48 IST
ಅಕ್ಷರ ಗಾತ್ರ

ಯಲಹಂಕ: ಕೊಠಡಿಗಳಲ್ಲಿ ವಿವಿಧ ದೇವರ ಮೂರ್ತಿಗಳ ಪ್ರತಿಷ್ಠಾಪನೆ, ವಿಶೇಷ ಅಲಂಕಾರ, ಸಾಂಪ್ರದಾಯಿಕ ಹಬ್ಬಗಳ ಆಚರಣೆ, ತೆಂಗಿನ ಚಪ್ಪರ, ತಳಿರುತೋರಣ, ವಿವಿಧ ಬಗೆಯ ಹೂವುಗಳು ಹಾಗೂ ಚಿತ್ತಾರದ ರಂಗೋಲಿಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಅವರಣ, ವಿವಿಧ ಬಗೆಯ ಉಡುಪುಗಳನ್ನು ತೊಟ್ಟು, ಅಲಂಕೃತಗೊಂಡಿದ್ದ ಎತ್ತಿನ ಬಂಡಿಯಲ್ಲಿ ಸವಾರಿಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು....

ಒಟ್ಟಾರೆ ಇಡೀ ಕಾಲೇಜಿನ ತುಂಬಾ ಹಬ್ಬದ ವಾತಾವರಣ. ಹಾಡು, ನೃತ್ಯ, ತೇಲಿಬರುತ್ತಿದ್ದ ಸಂಗೀತದ ಬೀಟ್ಸ್‌ಗಳಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು.

ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾರತೀಯ ಹಬ್ಬಗಳ ಪರಿಕಲ್ಪನೆಯಡಿಯಲ್ಲಿ ಆಯೋಜಿಸಿದ್ದ ಎಸ್‌.ಎಫ್‌.ಜಿ.ಸಿ ಉತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.

ವಿದ್ಯಾರ್ಥಿಗಳಿಂದ ವಿಶೇಷವಾಗಿ ಅಲಂಕೃತಗೊಳಿಸಿದ್ದ ಒಟ್ಟು 34 ಕೊಠಡಿಗಳಲ್ಲಿ ವಿವಿಧ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸಿದರು. ತುಳಸಿಹಬ್ಬ, ವೈಕುಂಠ ಏಕಾದಶಿ, ವಿವಿಧ ರಾಜ್ಯಗಳಲ್ಲಿ ಆಚರಿಸುವ ಸಂಕ್ರಾಂತಿ, ಓಣಂ ಸೇರಿಂದ ವಿವಿಧ ಹಬ್ಬಗಳ ಆಚರಣೆಯ ಪರಿಕಲ್ಪನೆಯ ಮಾದರಿಗಳು ಗಮನ ಸೆಳೆದವು.

ವಿದ್ಯಾರ್ಥಿಗಳು ಹಬ್ಬಗಳಿಗೆ ತಕ್ಕಂತೆ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಅಲ್ಲದೆ ಹಾಡುಗಳನ್ನು ಹಾಡುವುದರ ಜೊತೆಗೆ ನೃತ್ಯಮಾಡಿ ಖುಷಿಪಟ್ಟರು. 

ಈ ವೇಳೆ ಮಾತನಾಡಿದ ಶೇಷಾದ್ರಿಪುರ ಶಿಕ್ಷಣದತ್ತಿಯ ಟ್ರಸ್ಟಿ ಡಬ್ಲ್ಯೂ.ಡಿ ಅಶೋಕ್‌, ‘ವಿದ್ಯಾರ್ಥಿಗಳಲ್ಲಿ ಭಾವೈಕ್ಯ, ದೇಶದ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಪರಿಚಯಿಸುವ ದಿಸೆಯಲ್ಲಿ ಇಂತಹ ಉತ್ಸವಗಳು ಅತ್ಯಗತ್ಯ‘ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಎಸ್‌.ಎನ್‌.ವೆಂಕಟೇಶ್‌, ಶೈಕ್ಷಣಿಕ ಮಂಡಳಿ ಸದಸ್ಯೆ ಗೋದಾಮಣಿ, ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ.ವಿನಯ್‌, ಎಂ.ಕಾಂ ವಿಭಾಗದ ನಿರ್ದೇಶಕ ರಾಜೀವ್‌ ಪಿಳ್ಳೈ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ದೊಡ್ಡೇಗೌಡ, ಸಾಂಸ್ಕೃತಿಕ ಉತ್ಸವ ಸಮಿತಿಯ ಸಂಚಾಲಕಿ ಪಾವನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT