ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶ: ಸಚಿವ ಅರ್ಜುನ್ ಮುಂಡಾ

ಕೃಷಿ ಮತ್ತು ರೈತ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ
Published 8 ಜನವರಿ 2024, 19:52 IST
Last Updated 8 ಜನವರಿ 2024, 19:52 IST
ಅಕ್ಷರ ಗಾತ್ರ

ಹೆಸರಘಟ್ಟ: ’ಕೃಷಿ ಆರ್ಥಿಕತೆಯಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ಶೇ 33ರಷ್ಟಿದ್ದು, ಇದನ್ನು ಇನ್ನಷ್ಟು ಹೆಚ್ಚಿಸುವ ಅವಕಾಶಗಳಿವೆ’ ಎಂದು ಕೃಷಿ ಮತ್ತು ರೈತ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅಭಿಪ್ರಾಯಪಟ್ಟರು.

ಇಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ(ಐಐಎಚ್‌ಆರ್‌) ಭಾನುವಾರ ಭೇಟಿ ನೀಡಿ, ರೈತರು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು,’ದೇಶದಲ್ಲಿ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಾಧ್ಯತೆಗಳಿವೆ. ತೋಟಗಾರಿಕೆ ಬೆಳೆಗಳ ಉತ್ಪಾದನೆ ಪ್ರಮಾಣ ಹೆಚ್ಚಿದರೆ, ದೇಶೀಯ ಮಾರುಕಟ್ಟೆಯಲ್ಲದೇ, ಜಾಗತಿಕ ಮಾರುಕಟ್ಟೆಯಲ್ಲೂ ನಮ್ಮ ಅಸ್ತಿತ್ವವನ್ನು ಸ್ಥಾಪಿಸಬಹುದು’ ಎಂದು ಅವರು ಹೇಳಿದರು. 

‘ಐಐಎಚ್‌ಆರ್‌, ತರಕಾರಿ, ಹೂವಿನ ಬೆಳೆ ಸೇರಿದಂತೆ 300 ಕ್ಕೂ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿಯೂ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ. ತೋಟಗಾರಿಕೆ ಉತ್ಪಾದನೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು. 

’ತೋಟಗಾರಿಕೆ ಕ್ಷೇತ್ರವನ್ನು ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ತೋಟಗಾರಿಕೆ ಉತ್ಪಾದನೆಯು ಗಣನೀಯವಾಗಿ ಏರಿಕೆಯಾಗುತ್ತಿದ್ದು, 2022-23ರ ಅವಧಿಯಲ್ಲಿ 350 ಮಿಲಿಯನ್ ಟನ್‌ಗಳನ್ನು ತಲುಪಿದೆ’ ಎಂದರು.

’ಹೆಚ್ಚು ಹೆಚ್ಚು ರೈತರನ್ನು ಸಂಶೋಧನಾ ಕೇಂದ್ರದ ಪ್ರಯೋಗಾಲಯಗಳಿಗೆ ಕರೆತಂದು, ಇಲ್ಲಿ ನಡೆಯುವ ಪ್ರಯೋಗಗಳನ್ನು ತೋರಿಸಬೇಕು, ಸಂಶೋಧನಾ ತಂತ್ರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು’ ಎಂದು ವಿಜ್ಞಾನಿಗಳಿಗೆ ಅವರು ತಿಳಿಸಿದರು.

‘ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾಲಂಬನೆ ಸಾಧಿಸಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನಿಂದ ಆರಂಭಿಸಿರುವ ಪ್ರಧಾನ ಮಂತ್ರಿ ಬುಡಕಟ್ಟು ನ್ಯಾಯ್ ಮಹಾಅಭಿಯಾನ್‌ ಮೂಲಕ ಬುಡಕಟ್ಟು ಸಮುದಾಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಐಐಎಚ್‌ಆರ್‌ ನಿರ್ದೇಶಕ ಪ್ರೊ. ಸಂಜಯ್‌ಕುಮಾರ್ ಸಿಂಗ್ ಸ್ವಾಗತಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT