ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಕಂಪನಿ ವಿರುದ್ಧ ಚಾರ್ಜ್‌ಶೀಟ್

ಕಾರಿನೊಳಗೆ ತಾಯಿ– ಮಗು ಮೃತಪಟ್ಟ ಪ್ರಕರಣ
Last Updated 24 ಮಾರ್ಚ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ನೆಲ್ಲೂರಹಳ್ಳಿಯ ‘ಸುಮಧುರಂ ಆನಂದಂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಾರ್ಕಿಂಗ್‌ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ತಾಯಿ– ಮಗು ಮೃತಪಟ್ಟ ಪ್ರಕರಣ ಸಂಬಂಧ ಮಾರುತಿ ಸುಜುಕಿ ಕಂಪನಿ ನೌಕರರು ಹಾಗೂಕುಂದಲಹಳ್ಳಿಯ ‘ಕಲ್ಯಾಣಿ ಮೋಟರ್ಸ್‌’ನ ಉದ್ಯೋಗಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಫೆ. 2ರಂದು ಬೆಳಿಗ್ಗೆ ಮಗು ಪರಮ್‌ (4) ಜೊತೆಯಲ್ಲಿ ಮಾರುತಿ ರಿಟ್ಜ್‌ ಕಾರಿನಲ್ಲಿ ಶಾಪಿಂಗ್‌ಗೆ ಹೊರಗೆ ಹೋಗಿದ್ದ ನೇಹಾ ವರ್ಮ (34), ಮಧ್ಯಾಹ್ನ 3.25ರ ಸುಮಾರಿಗೆ ವಾಪಸ್‌ ಬಂದು ಅಪಾರ್ಟ್‌ಮೆಂಟ್‌ ಸಮುಚ್ಚಯದ ನೆಲಮಹಡಿಯಲ್ಲಿ ಕಾರು ನಿಲ್ಲಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲೇ ತಾಯಿ–ಮಗು ಮೃತಪಟ್ಟಿದ್ದರು.

ಘಟನೆ ಸಂಬಂಧ ನೇಹಾ ಪತಿ ರಾಜೇಶ್‌ ನೀಡಿದ್ದ ದೂರಿನಡಿ ಮಾರುತಿ ಕಂಪನಿ ನೌಕರರು ಹಾಗೂ ‘ಕಲ್ಯಾಣಿ ಮೋಟರ್ಸ್‌’ನ ಉದ್ಯೋಗಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ 10 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಪವರ್‌ ವಿಂಡೊದಲ್ಲಿ ದೋಷ: ‘ಕಾರಿನ ಪವರ್ ವಿಂಡೊದಲ್ಲಿ ಶಾರ್ಟ್‌ ಸರ್ಕೀಟ್ ಉಂಟಾಗಿ, ಡೋರ್ ಪ್ಯಾನಲ್ ಪ್ಲಾಸ್ಟಿಕ್ ಕವರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ನಂತರ, ಇಡೀ ಕಾರಿನೊಳಗೆ ಬೆಂಕಿ ಆವರಿಸಿತ್ತು. ನೇಹಾ ಹಾಗೂ ಪರಮ್‌ ಕಾರಿನೊಳಗೇ ಮೃತಪಟ್ಟಿದ್ದರು’ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.

‘ಮಾರುತಿ ಸುಜುಕಿ ಕಂಪನಿಯ ಗುರುಗ್ರಾಮದ ಘಟಕದಲ್ಲಿ 2010ರಲ್ಲಿ ಮಾರುತಿ ರಿಟ್ಜ್‌ ಕಾರು ತಯಾರಿಸಲಾಗಿತ್ತು. ಬೆಂಗಳೂರಿನ ಬೆಳ್ಳಂದೂರು– ಮಾರತ್ತಹಳ್ಳಿ ರಸ್ತೆಯಲ್ಲಿರುವ ಪ್ರಥಮ್ ಮೋಟಾರ್ಸ್‌ ಮಳಿಗೆಯವರು ಅದನ್ನು ನೇಹಾ ಅವರಿಗೆ 2010ರ ಮಾರ್ಚ್‌ 19ರಂದು ಮಾರಾಟ ಮಾಡಿದ್ದರು.’

‘ಘಟಕದ ಅಧಿಕಾರಿಗಳು ಹಾಗೂ ತಾಂತ್ರಿಕ ವರ್ಗದವರು, ಕಾರಿನ ತಯಾರಿ ವೇಳೆ ಎಂಜಿನ್ ಬಿಡಿ ಭಾಗಗಳು ಮತ್ತು ಪವರ್ ವಿಂಡೊಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಸರಿಸಿರಲಿಲ್ಲ. ಅದೇ ಕಾರಣಕ್ಕೆ ಕಾರು ಸುಮಾರು 8 ವರ್ಷಗಳ ನಂತರ ಏಕಾಏಕಿ ಶಾರ್ಟ್ ಸರ್ಕೀಟ್ ಆಗಿ ಸುಟ್ಟು ಹೋಯಿತು’ ಎಂದು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

‘ಕುಂದಲಹಳ್ಳಿಯಲ್ಲಿರುವ ಕಲ್ಯಾಣಿ ಮೋಟರ್ಸ್‌ನ ತಾಂತ್ರಿಕ ವರ್ಗದವರು ಮತ್ತು ಮೇಲ್ವಿಚಾರಕರ ನಿರ್ಲಕ್ಷ್ಯವೂ ಘಟನೆಗೆ ಕಾರಣ ಎಂಬುದು ತನಿಖೆಯಿಂದ ಕಂಡುಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ನೀಡಿರುವ ವರದಿಯನ್ನು ಆರೋಪ ಪಟ್ಟಿಯೊಂದಿಗೆ ಲಗತ್ತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

2007–11ರಲ್ಲಿ ತಯಾರಾದ ಕಾರುಗಳಲ್ಲಿ ದೋಷ
‘ಮಾರುತಿ ಸುಜುಕಿ ಕಂಪನಿಯು 2007–2011ನೇ ಸಾಲಿನಲ್ಲಿ ತಯಾರಿಸಲಾಗಿದ್ದ ಕಾರುಗಳಲ್ಲೂ ದೋಷಪೂರಿತ ಪವರ್ ವಿಂಡೊ ಕಂಡುಬಂದಿದೆ. ಈ ಸಮಯದಲ್ಲಿ ಕಂಪನಿಯವರು, ಸದರಿ ದೋಷವನ್ನು ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪ ಪಟ್ಟಿಯಲ್ಲಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT