ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವತ್ತಿಗೆ ₹ 4.24 ಕೋಟಿ ಪರಿಹಾರ: ಸಿಸಿಬಿ ತನಿಖೆ ಆರಂಭ

Last Updated 6 ಜುಲೈ 2021, 21:54 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವತ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಟ್ರಸ್ಟ್ ಜಾಗವೆಂದು ಹೇಳಿ ₹ 4.24 ಕೋಟಿ ಪರಿಹಾರ ಪಡೆದು ಸರ್ಕಾರವನ್ನೇ ವಂಚಿಸಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ನಗರದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ವಂಚನೆ ಬಗ್ಗೆ ಅಮೃತಹಳ್ಳಿಯ ಎಚ್‌.ಜಿ. ಲಕ್ಷ್ಮಿ ಎಂಬುವರು ದೂರು ನೀಡಿದ್ದಾರೆ. ಚಿನ್ನಪ್ಪನಹಳ್ಳಿಯ ಪಿ. ಕಮಲಮ್ಮ, ಟಿ. ಮುರುಳೀಧರ್, ವಿ. ಲತಾ, ಟಿ. ವಿಜಯ್‌ಕುಮಾರ್, ಅನಿತಾ, ಟಿ. ಉಮಾಶಂಕರ್ ಹಾಗೂ ಟಿ. ಪ್ರತಿಭಾ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣವು ಗಂಭೀರವಾಗಿದ್ದು, ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಸಿಸಿಬಿ ವಿಶೇಷ ತಂಡವೇ ತನಿಖೆ ಆರಂಭಿಸಿದೆ’ ಎಂದೂ ತಿಳಿಸಿವೆ.

ಆಗಿದ್ದೇನು: ‘ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಚಿನ್ನಪ್ಪನಹಳ್ಳಿಯ ಸರ್ವೇ ನಂಬರ್ –35ರಲ್ಲಿ 14 ಗುಂಟೆ ಜಾಗವಿದ್ದು, ಅದೇ ಸ್ಥಳದಲ್ಲಿ ಆಂಜನೇಯ ದೇವಸ್ಥಾನವಿದೆ. ಅದರಲ್ಲಿ 3 ಗುಂಟೆ ಜಾಗವನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಇದೇ ಸ್ಥಳದಲ್ಲಿದ್ದ 161.99 ಚದರ ಮೀಟರ್ ಜಾಗವನ್ನು ಇತ್ತೀಚೆಗೆ ಕೆಲಸಗಾರರು ತೆರವು ಮಾಡುತ್ತಿದ್ದರು. ದೂರುದಾರರು ಹಾಗೂ ಇತರರು ಹೋಗಿ ವಿಚಾರಿಸಿದಾಗ, ಜಾಗವನ್ನು ಮೆಟ್ರೊ ಕಾಮಗಾರಿಗಾಗಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದು ಗೊತ್ತಾಗಿತ್ತು. ಕೆಐಎಡಿಬಿ ಕಚೇರಿಗೆ ಹೋಗಿ ಪರಿಶೀಲಿಸಿದಾಗ, ಆಂಜನೇಯ ಸ್ವಾಮಿ ದೇವಸ್ಥಾನವಿದ್ದ ಸರ್ಕಾರಿ ಸ್ವತ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಜಾಗವೆಂದು ಹೇಳಿ ಆರೋಪಿಗಳು ₹ 4.24 ಕೋಟಿ ಪರಿಹಾರ ಪಡೆದಿರುವುದು ಬಯಲಾಗಿರುವುದಾಗಿ ದೂರುದಾರರು ಹೇಳಿದ್ದಾರೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT