ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವೃದ್ಧೆಗೆ ₹ 2.68 ಕೋಟಿ ವಂಚನೆ

ಹೊಸ ಮನೆ ಕೊಡಿಸುವ ನೆಪದಲ್ಲಿ ಹಣ ಪಡೆದಿದ್ದವ ವಶಕ್ಕೆ
Last Updated 5 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದಲ್ಲಿದ್ದ ವೃದ್ಧೆ ಮಣಿ ತಿರುಮಲೈ (75) ಅವರಿಗೆ ₹ 2.68 ಕೋಟಿ ವಂಚನೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಕನ್ಹಯ್ಯ ಕುಮಾರ್‌ ಯಾದವ್ ಎಂಬುವರನ್ನು ಹುಳಿಮಾವು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಭಾರತದ ಮಣಿ, ಹಲವು ವರ್ಷಗಳ ಹಿಂದೆಯೇ ಅಮೆರಿಕಕ್ಕೆ ಹೋಗಿ ನೆಲೆಸಿದ್ದಾರೆ. ಅಲ್ಲಿಯ ಪೌರತ್ವವನ್ನೂ ಪಡೆದಿದ್ದಾರೆ. ಅಮೆರಿಕ ತೊರೆದು ಬೆಂಗಳೂರಿನಲ್ಲಿ ನೆಲೆಸಲು ಅವರು ಇಚ್ಛಿಸಿದ್ದರು. ಹೊಸ ಮನೆ ಕೊಡಿಸುವ ನೆಪದಲ್ಲಿ ಆರೋಪಿ ಕನ್ಹಯ್ಯ ಕುಮಾರ್‌ ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವೃದ್ಧೆ ಮಣಿ ಅವರ ಸಹೋದರಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದಾರೆ. ಅವರನ್ನು ಮಾತನಾಡಿಸಲು ಮಣಿ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಆರೋಪಿ ಕನ್ಹಯ್ಯ ಕುಮಾರ್‌, ಹುಳಿಮಾವು ಬಳಿ ಸರ್ವೀಸ್ ಅಪಾರ್ಟ್‌ಮೆಂಟ್ ನಿರ್ವಹಣೆ ಮಾಡುತ್ತಿದ್ದ. ಈತನ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ವೃದ್ಧೆ ಉಳಿದುಕೊಳ್ಳುತ್ತಿದ್ದರು. ಅದೇ ವೇಳೆಯೇ ಇಬ್ಬರಿಗೂ ಪರಿಚಯವಾಗಿತ್ತು.’

‘ಕೋವಿಡ್ ಸಂದರ್ಭದಲ್ಲಿ ಪತಿಯನ್ನು ಕಳೆದು
ಕೊಂಡಿದ್ದ ಮಣಿ, ಬೆಂಗಳೂರಿಗೆ ಬಂದು ವಾಸವಿರಲು ತೀರ್ಮಾನಿಸಿದ್ದರು. ಇದಕ್ಕಾಗಿ ಮನೆ ಹುಡುಕುತ್ತಿದ್ದರು. ಪರಿಚಯಸ್ಥರೊಬ್ಬರ ಮನೆ ಇರುವುದಾಗಿ ಹೇಳಿದ್ದ ಆರೋಪಿ ಕನ್ಹಯ್ಯ ಕುಮಾರ್, ₹ 2.68 ಕೋಟಿಗೆ ವ್ಯವಹಾರ ಆಗುವುದಾಗಿ ತಿಳಿಸಿದ್ದ’ ಎಂದು ತಿಳಿಸಿವೆ.

‘ವೈದ್ಯಕೀಯ ಚಿಕಿತ್ಸೆಗಾಗಿ ಮಹಿಳೆ ತುರ್ತಾಗಿ ಅಮೆರಿಕಕ್ಕೆ ಹೋಗಿದ್ದರು. ಅವರಿಗೆ ಕರೆ ಮಾಡಿದ್ದ ಆರೋಪಿ, ‘ಮನೆ ಮಾಲೀಕರಿಗೆ ಹಣದ ಅವಶ್ಯಕತೆ ಇದೆ. ಹಣ ನೀಡಿದರೆ, ಮನೆ ಮಾರಾಟ ಮಾಡುತ್ತಾರೆ’ ಎಂದಿದ್ದ. ಅಮೆರಿಕದಿಂದ ಬರಲು ಸಮಯ ಬೇಕೆಂದು ವೃದ್ಧೆ ಕೇಳಿದ್ದರು. ಆರೋಪಿಯು ‘ಹಣ ಕಳುಹಿಸಿ. ನನ್ನ ಹೆಸರಿಗೆ ನೋಂದಣಿ ಮಾಡಿಸುತ್ತೇನೆ. ಬೆಂಗಳೂರಿಗೆ ನೀವು ಬಂದ ನಂತರ ವರ್ಗಾವಣೆ ಮಾಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ವೃದ್ಧೆ, ಹಣ ಹಾಕಿದ್ದರು’ ಎಂದು ಹೇಳಿವೆ. ‘ಇತ್ತೀಚೆಗೆ ವೃದ್ಧೆ, ಬೆಂಗಳೂರಿಗೆ ಬಂದಿದ್ದರು. ಅವರನ್ನು ದೂರವಿಡಲು ಯತ್ನಿಸಿದ್ದ ಆರೋಪಿ, ತಮ್ಮೂರು ಬಿಹಾರಕ್ಕೆ ಪರಾರಿಯಾಗಲು ಸಜ್ಜಾಗಿದ್ದ. ವೃದ್ಧೆ ನೀಡಿದ್ದ ಮಾಹಿತಿ ಆಧರಿಸಿ ರೈಲ್ವೆ ನಿಲ್ದಾಣದಲ್ಲೇ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT