ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸ್ಟೆಪ್‌ಡೌನ್ ಆಸ್ಪತ್ರೆಗಳಾಗಿ ಹೋಟೆಲ್‌

ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೃಪಾಂಕ– ಭತ್ಯೆಗೆ ನಿರ್ಧಾರ
Last Updated 1 ಮೇ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್‌ಗಳನ್ನು ಸ್ಟೆಪ್‌ಡೌನ್ ಆಸ್ಪತ್ರೆಗಳಾಗಿ ರೂಪಿಸಲು ಹಾಗೂ ಕೇಂದ್ರೀಕೃತ ಆಮ್ಲಜನಕ ಪೂರೈಸುವ ವ್ಯವಸ್ಥೆ ಇರುವ ಹಾಸಿಗೆಗಳನ್ನು ಐಸಿಯು ಹಾಸಿಗೆಗಳಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನಿಸಿದೆ.

ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಬಳಸಿ ಆಮ್ಲಜನಕ ಪೂರೈಸುವ ಹಾಸಿಗೆ ವ್ಯವಸ್ಥೆಯ ಸ್ಟೆಪ್ ಡೌನ್ (ವೆಂಟಿಲೇಟರ್‌ ರಹಿತ ಐಸಿಯು) ಕೋವಿಡ್ ಆಸ್ಪತ್ರೆಗಳನ್ನಾಗಿ ಹೋಟೆಲ್‌ಗಳನ್ನು ಪರಿವರ್ತಿಸಲು ನಿರ್ಣಯ ಕೈಗೊಳ್ಳಲಾಗಿದೆ.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಮತ್ತು ಅವರಿಗೆ ಸೂಕ್ತ ಭತ್ಯೆ ನೀಡಲಾಗುವುದು. ನರ್ಸಿಂಗ್, ಫಾರ್ಮಸಿ, ಫಿಜಿಯೋಥೆರಪಿ, ಆಯುಷ್, ದಂತ ವೈದ್ಯಕೀಯ ಕೋರ್ಸ್‌ಗಳ ಹಾಗೂ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೂಡಾ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು. ವಿದೇಶಗಳಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ ನೋಂದಣಿ ಮಾಡುವ ಬಗ್ಗೆ ಪರಿಶೀಲಿಸಲು ತೀರ್ಮಾನಿಸಲಾಗಿದೆ.

ರೋಗಲಕ್ಷಣರಹಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು, ಅದನ್ನು ಕಡಿಮೆಗೊಳಿಸಲು, ಸೋಂಕಿತರನ್ನು ಪ್ರತ್ಯೇಕಿಸಿ ಅಗತ್ಯ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲು ಮತ್ತು ಲಕ್ಷಣರಹಿತರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯ ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಯಿತು.

ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‌ಗಳ ಸಾಮಾನ್ಯ ಹಾಸಿಗೆಗಳನ್ನು ಆಮ್ಲಜನಕ ಪೂರೈಸುವ ಸೌಲಭ್ಯ ಇರುವ ಹಾಸಿಗೆಗಳಾಗಿ ಪರಿವರ್ತಿಸಲು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದಲೇ ಆರ್ಥಿಕ ನೆರವು ನೀಡುವುದು. ಕಡಿಮೆ ಕಾರ್ಯಭಾರವಿರುವ ವೈದ್ಯ ಕೀಯ ಸಿಬ್ಬಂದಿ ಗುರುತಿಸಿ, ಅಂಥವರನ್ನು ಪೂರ್ಣ ವಾಗಿ ಬಳಸಿಕೊಳ್ಳಲು ಕೂಡಾ ನಿರ್ಧರಿಸಲಾಯಿತು.

ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಜಯರಾಂ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT