ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದ ಅಮಲಿನಲ್ಲಿ ಮಗನನ್ನು ಥಳಿಸಿದ ತಾಯಿ

Last Updated 7 ಜುಲೈ 2019, 1:20 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತರಾಗಿದ್ದ ತಾಯಿಯೊಬ್ಬರು ತಮ್ಮ ನಾಲ್ಕು ವರ್ಷದ ಮಗನನ್ನು ಕಲ್ಲಿನಿಂದ ಹೊಡೆದು ಥಳಿಸಿರುವ ಘಟನೆ ಲಗ್ಗೆರೆ ಬಳಿಯ ಕೆಂಪೇಗೌಡ ನಗರದಲ್ಲಿ ನಡೆದಿದೆ.

ಮಗುವನ್ನು ತಾಯಿಯಿಂದ ರಕ್ಷಿಸಿರುವ ಸ್ಥಳೀಯರು ಹಾಗೂ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ತಾಯಿ ತಲೆಮರೆಸಿಕೊಂಡಿದ್ದಾರೆ.

‘ಕಸ ಆಯ್ದು ಜೀವನ ನಡೆಸುತ್ತಿರುವ ಲತಾ ಎಂಬುವರ ಪತಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ತಾಯಿ– ಮಗ ಇಬ್ಬರಿಗೂ ಮನೆ ಇಲ್ಲ. ತಂಗುದಾಣ, ಕಲ್ಯಾಣ ಮಂಟಪ ಹಾಗೂ ಬೀದಿ ಬದಿಯೇ ಅವರ ವಾಸಸ್ಥಳ’ ಎಂದು ಸ್ಥಳೀಯ ವ್ಯಾಪಾರಿ ಉದಯ್ ಶೆಟ್ಟಿ ಹೇಳಿದರು.

‘ಪತಿ ತೀರಿಕೊಂಡಾಗಿನಿಂದ ನಿತ್ಯ ರಾತ್ರಿ ಮದ್ಯ ಕುಡಿಯಲಾರಂಭಿಸಿರುವ ಲತಾ, ಅದರ ಅಮಲಿನಲ್ಲಿ ಮಗನನ್ನು ಮನಬಂದಂತೆ ಥಳಿಸುತ್ತಿದ್ದರು. ‘ನನಗೆ ಗಂಡ ಇಲ್ಲ. ಮನೆಯೂ ಇಲ್ಲ. ನಿನ್ನನ್ನು ಸಾಕಲು ಆಗುವುದಿಲ್ಲ. ನೀನು ಸತ್ತು ಹೋಗು’ ಎಂದು ಮಗನಿಗೆ ಹೇಳಿ ಕೂಗಾಡುತ್ತಿದ್ದರು.’

‘ಇದೇ 3ರಂದು ರಾತ್ರಿ ಕೆಂಪೇಗೌಡ ಪ್ರತಿಮೆ ಬಳಿ ಮಗನಿಗೆ ಜಲ್ಲಿ ಕಲ್ಲಿನಿಂದ ಲತಾ ಹೊಡೆಯುತ್ತಿದ್ದರು. ಮಗ ಅಳಲಾರಂಭಿಸಿದಾಗ, ಅಂಗಿ ಹಿಡಿದು ರಸ್ತೆಯಲ್ಲೇ ಉರುಳಾಡಿಸಿ ಥಳಿಸಿದ್ದರು. ಬಾಲಕನ ತಲೆ, ಕೈ ಮತ್ತು ಕಾಲಿಗೆ ಗಾಯವಾಗಿ ರಕ್ತ ಬರುತ್ತಿತ್ತು’ ಎಂದು ಉದಯ್ ಶೆಟ್ಟಿ ಹೇಳಿದರು.

‘ಬಾಲಕನ ಚೀರಾಟ ಕೇಳಿ ಸಹಾಯಕ್ಕೆ ಹೋದ ಸ್ಥಳೀಯರು, ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ತಾಯಿ ಓಡಿಹೋದರು. ನರಳಾಡುತ್ತಿದ್ದಂತೆ ಬಾಲಕನನ್ನು ಸ್ಥಳೀಯರು ಹಾಗೂ ಇನ್‌ಸ್ಪೆಕ್ಟರ್‌ ಉದಯ್ ರವಿ ಅವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆಂಪೇಗೌಡ ನಗರ ಠಾಣೆ ಪೊಲೀಸರು ಮಗನನ್ನು ಥಳಿಸಿದ ತಾಯಿ ವಿರುದ್ಧ ಹಲ್ಲೆ (ಐಪಿಸಿ 324), ಜೀವ ಬೆದರಿಕೆ (ಐಪಿಸಿ 506) ಆರೋಪ ಹಾಗೂ ಬಾಲ ನ್ಯಾಯ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT