ಮಂಗಳವಾರ, ಜೂನ್ 28, 2022
24 °C
ಭಾರತೀಯರನ್ನೇ ನಿರ್ದೇಶಕರನ್ನಾಗಿ ಮಾಡಿ ಕಂಪನಿ ಸೃಷ್ಟಿ | ‘ಡಬ್ಲ್ಯುಪಿ ರಮ್ಮಿ’ ಕಂಪನಿ ಅಡಿ ಅಕ್ರಮ ?

₹ 300 ಕೋಟಿ ಆನ್‌ಲೈನ್ ವಂಚನೆ; ಚೀನಾ ಪ್ರಜೆ ಭಾಗಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪವರ್‌ ಬ್ಯಾಂಕ್‌’ ಸೇರಿದಂತೆ ವಿವಿಧ ಆನ್‌ಲೈನ್‌ ವೇದಿಕೆಗಳ ಮೂಲಕ ಲಾಭದ ಆಮಿಷವೊಡ್ಡಿ ಜನರಿಂದ ಅಂದಾಜು ₹ 250 ಕೋಟಿಯಿಂದ ₹ 300 ಕೋಟಿಯಷ್ಟು ಹಣ ಸಂಗ್ರಹಿಸಿ ವಂಚಿಸಿವೆ ಎನ್ನಲಾದ ಕಂಪನಿಗಳ ಕೃತ್ಯದಲ್ಲಿ ಚೀನಾ ಪ್ರಜೆ ಭಾಗಿಯಾಗಿದ್ದಾರೆ !

ದಿನ ಹಾಗೂ ವಾರ ಲಾಭದ ಆಮಿಷವೊಡ್ಡಿ ರಾಜ್ಯದ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪದಡಿ 13 ಕಂಪನಿಗಳ ವಿರುದ್ಧ ‘ರೇಜೋರ್‌ಪೇ’ ಕಂಪನಿಯ ಕಾನೂನು ವಿಭಾಗದ ಪ್ರತಿನಿಧಿ ಅಭಿಷೇಕ್ ಅಭಿನವ್ ಆನಂದ್ ಎಂಬುವರು ಸಿಐಡಿ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

‘ಡಬ್ಲ್ಯುಪಿ ರಮ್ಮಿ’ ಕಂಪನಿ ನಿರ್ದೇಶಕ ಅನಸ್ ಅಹ್ಮದ್, ಇಬ್ರಾಹಿಂ ಅಮೀರ್, ಧೋನ್‌ಡುಪ್ ವಂಗ್ಯಾಲ್, ಅರೋಕಿಯಾನಾಥನ್, ರಾಮ್ ಉಜಘರ್, ಪ್ರಕಾಶ್ ವೈರಾಗಿ, ಹರೇಶ್‌ಬಾಯ್ ಗೋಬರಪಬಾಯ್, ವನಜಾರ್ ವಿಜಯ್ ಬಾಯ್, ವನಜಾರ್ ಮಮತಾ ಬೆನ್, ಪರ್ಪಿಲೆಹ್ಯುಸ್ ಸನ್ನಿ, ಜ್ಯೋತಿ ತಿವಾರಿ, ಭಗವತಿ ಪಂತ್‌ ಎಂಬುವರ ವಿರುದ್ಧ ವಂಚನೆ (ಐಪಿಸಿ 420) ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್‌ ದಾಖಲಾಗಿದೆ.

ಆರೋಪಿ ಅನಸ್‌ ಅಹ್ಮದ್‌ ಬಗ್ಗೆ ಸಿಐಡಿ ಮಾಹಿತಿ ಕಲೆಹಾಕುತ್ತಿದೆ. ಆತನ ಪತ್ನಿಯೂ ಆಗಿರುವ ಚೀನಾ ಪ್ರಜೆ ಹು ಕ್ಸಿಯೋಲಿನ್ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆಕೆ ಹಾಗೂ ಆಕೆಯ ಪತಿಗಾಗಿ ಸಿಐಡಿ ಹುಡುಕಾಟ ನಡೆಸುತ್ತಿದೆ.

ಬಂಧನ ಭೀತಿಯಲ್ಲಿರುವ ದಂಪತಿ, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿ ಪೊಲೀಸರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ತಯಾರಿ ನಡೆಸುತ್ತಿದ್ದಾರೆ. ಅರ್ಜಿ ವಿಚಾರಣೆ ಜೂನ್ 15ರಂದು ನಡೆಯಲಿದೆ.

‘ರೇಜೋರ್ ಪೇ’ ದೂರಿನ ವಿವರ: ‘ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಹಣ ವರ್ಗಾವಣೆ ಕಂಪನಿಯಾಗಿ ‘ರೇಜೋರ್ ಪೇ’ ಕೆಲಸ ಮಾಡುತ್ತಿದೆ. ವಂಚನೆ ಪ್ರಕರಣದಡಿ 13 ಆರೋಪಿಗಳ ಕಂಪನಿಗಳು ನಮ್ಮ ಕಂಪನಿಯಡಿ ನೋಂದಣಿ ಮಾಡಿಕೊಂಡಿವೆ’ ಎಂದು ರೇಜೋರ್ ಪೇ ಕಂಪನಿಯ ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ.

‘ಪವರ್ ಬ್ಯಾಂಕ್’ ಹಾಗೂ ಇತರೆ ಆನ್‌ಲೈನ್‌ ಆ್ಯಪ್‌ಗಳನ್ನು ಸೃಷ್ಟಿಸಿರುವ ಆರೋಪಿಗಳು, ಸಾವಿರಾರು ಗ್ರಾಹಕರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದೂ ಅಭಿಷೇಕ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ಡಬ್ಲ್ಯುಪಿ ರಮ್ಮಿ’ ಕಂಪನಿ ಅಡಿ ಅಕ್ರಮ: ‘ಚೀನಾ ಪ್ರಜೆ ಹು ಕ್ಸಿಯೋಲಿನ್, ನಗರಕ್ಕೆ ಬಂದು ದೇವನಹಳ್ಳಿ ಬಳಿಯ ಸಾದಹಳ್ಳಿ ಗೇಟ್‌ ಬಳಿ ನೆಲೆಸಿದ್ದಾಳೆ. ಹರಿಯಾಣ, ಗುಜರಾತ್, ದೆಹಲಿ, ಉತ್ತರಾಖಂಡ ಹಾಗೂ ಇತರೆ ರಾಜ್ಯಗಳ ನಿವಾಸಿಗಳನ್ನು ಪರಿಚಯಿಸಿಕೊಂಡು ತಂಡ ಕಟ್ಟಿಕೊಂಡಿದ್ದಾಳೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅನಸ್ ಅಹ್ಮದ್‌ನನ್ನು ಮದುವೆಯಾಗಿರುವ ಕ್ಸಿಯೋಲಿನ್, ಆತನ ಮೂಲಕ‘ಡಬ್ಲ್ಯುಪಿ ರಮ್ಮಿ’ ಕಂಪನಿ ತೆರೆದಿದ್ದಾಳೆ. ಅದಕ್ಕೆ ಪತಿ, ಆಕೆ ಹಾಗೂ ಇತರರು ನಿರ್ದೇಶಕರಿದ್ದಾರೆ.’

‘ಪ್ಲೇ ರಮ್ಮಿ ಗೇಮ್ ಡಾಟ್ ಕಾಮ್ ಜಾಲತಾಣ ಹಾಗೂ ಆ್ಯಪ್‌ ರೂಪಿಸಿರುವ ಆರೋಪಿಗಳು, ಅದರ ಮೂಲಕ ಆನ್‌ಲೈನ್ ಜೂಜು ಆಡಿಸುತ್ತಿದ್ದಾರೆ. ಆಟದಲ್ಲಿ ಸೋತವರು ಹಾಗೂ ಗೆದ್ದವರ ನಡುವೆ ಹಣದ ವಿನಿಮಯವಿದ್ದಾಗ ಕಂಪನಿಯೇ ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಬ್ಯಾಂಕ್ ಖಾತೆ, ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್, ಪೇಮೆಂಟ್ ಗೇಟ್ ವೇ ಹಾಗೂ ಇತರೆ ಮಾರ್ಗ ಬಳಸುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆನ್‌ಲೈನ್‌ ಜೂಜು ಮೂಲಕ ಹಣ ಸಂಪಾದಿಸುತ್ತಿರುವ ಕ್ಸಿಯೋಲಿನ್ ಹಾಗೂ ಅನಸ್ ಅಹ್ಮದ್, ಇತರೆ ಆರೋಪಿಗಳ ಜೊತೆ ಸೇರಿಕೊಂಡು ಬುಲ್‌ಫಿನ್ಚ್ ಸಾಫ್ಟ್‌ವೇರ್, ಎಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಪೊರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದಾರೆ. ಇದರ ಮೂಲಕ ‘ಪವರ್ ಬ್ಯಾಂಕ್’ ಆ್ಯಪ್ ರೂಪಿಸಿ ವಂಚಿಸಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

* ಇದೊಂದು ಗಂಭೀರ ಆನ್‌ಲೈನ್ ವಂಚನೆ ಪ್ರಕರಣ. ತನಿಖಾಧಿಕಾರಿಯಿಂದ ದಾಖಲೆ ಸಮೇತ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸುವಂತೆ ವಾದ ಮಂಡಿಸಲಾಗುವುದು.

–ಬಿ.ಎಸ್. ಪಾಟೀಲ, ಪಬ್ಲಿಕ್ ಪ್ರಾಸಿಕ್ಯೂಟರ್

ನೋಟಿಸ್ ನೀಡಿದರೂ ಗೈರು

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ಆದರೆ, ಅನಸ್ ಅಹ್ಮದ್ ಹಾಗೂ ಇತರರು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದಾರೆ.

‘ಪವರ್ ಬ್ಯಾಂಕ್‘ ಏಕಾಏಕಿ ಬಂದ್ 

ರಾಜ್ಯದಾದ್ಯಂತ ಸಾವಿರಾರು ಮಂದಿ ‘ಪವರ್ ಬ್ಯಾಂಕ್’ ಆ್ಯಪ್‌ನ ಆಯಾ ಯೋಜನೆಗಳಿಗೆ ತಕ್ಕಂತೆ ₹ 3 ಸಾವಿರದಿಂದ ಲಕ್ಷಾಂತರ ರೂಪಾಯಿವರೆಗೂ ಹೂಡಿಕೆ ಮಾಡಿದ್ದಾರೆ. ಆರ್‌ಬಿಐ ನಿಯಮದ ಕಾರಣ ನೀಡಿ ಏಕಾಏಕಿ ಆ್ಯಪ್ ಕಾರ್ಯಾಚರಣೆ ಬಂದ್ ಮಾಡಲಾಗಿದೆ.

‘ಸರ್ಕಾರಿ ನೌಕರರು, ಖಾಸಗಿ ಕಂಪನಿ ಉದ್ಯೋಗಿಗಳು, ಆಟೊ ಚಾಲಕರು, ವ್ಯಾಪಾರಿಗಳು, ಪತ್ರಕರ್ತರು, ಬರಹಗಾರರು, ಬೀದಿ ಬದಿ ವ್ಯಾಪಾರಿಗಳು, ಗಾರ್ಮೇಂಟ್ಸ್ ಕಾರ್ಖಾನೆ ಉದ್ಯೋಗಿಗಳು ಸೇರಿದಂತೆ ಹಲವರು ಹಣ ಹೂಡಿಕೆ ಮಾಡಿದ್ದರು’ ಎಂದೂ ಮೂಲಗಳು ಹೇಳಿವೆ.

ಸಿಐಡಿ ಸೈಬರ್ ಕ್ರೈಂ ವಿಭಾಗ ಮಾತ್ರವಲ್ಲದೇ ಬೆಂಗಳೂರು ಹಾಗೂ ರಾಜ್ಯದ ವಿವಿಧ ನಗರಗಳಲ್ಲೂ ವಂಚನೆ ಬಗ್ಗೆ ಎಫ್‌ಐಆರ್ ದಾಖಲಾಗಿವೆ.

ಕೃತ್ಯ ಭೇದಿಸಿರುವ ದೆಹಲಿ, ಉತ್ತರಾಖಂಡ ಪೊಲೀಸರು

‘ಪವರ್ ಬ್ಯಾಂಕ್’, ಸನ್‌ಫ್ಯಾಕ್ಟರಿ, ಈಜಿಪ್ಲಾನ್ ಸೇರಿದಂತೆ ವಿವಿಧ ಆ್ಯಪ್ ಮೂಲಕ ದೆಹಲಿಯಲ್ಲಿ ₹150 ಕೋಟಿ ಹಾಗೂ ಉತ್ತರಾಖಂಡನಲ್ಲಿ ₹ 250 ಕೋಟಿ ವಂಚನೆ ಆಗಿದೆ. ಎರಡೂ ರಾಜ್ಯದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಕೃತ್ಯವನ್ನು ಭೇದಿಸಿ ಆರೋಪಿಗಳ ಸಾವಿರಾರು ಖಾತೆಗಳನ್ನು ಜಪ್ತಿ ಮಾಡಿದ್ದಾರೆ.

ಕರ್ನಾಟಕದ ಸಿಐಡಿ ಸೈಬರ್ ಕ್ರೈಂ ಪೊಲೀಸರು ಸಹ ಪ್ರಕರಣದ ಬೆನ್ನು ಬಿದ್ದಿದ್ದು, ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು