ಗುರುವಾರ , ಜುಲೈ 29, 2021
23 °C

ಸಿಗರೇಟ್ ಲಂಚ ಪ್ರಕರಣ: ಪ್ರಭುಶಂಕರ್‌ ವಿರುದ್ಧದ ಸುಲಿಗೆ ಪ್ರಕರಣಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್

ಬೆಂಗಳೂರು: ಸಿಗರೇಟ್ ವಿತರಕರಿಂದ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಸಿಸಿಬಿ ಎಸಿಪಿ ಪ್ರಭುಶಂಕರ್ ವಿರುದ್ಧ ಕಾಟನ್ ಪೇಟೆ ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್‌ ಕುರಿತ ತನಿಖೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

ಈ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭುಶಂಕರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ನಾಯಪೀಠ, ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತು.

ಅರ್ಜಿ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿತು. ಅರ್ಜಿದಾರರ ಪರ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ದುರುದ್ದೇಶ ಮತ್ತು ದ್ವೇಷದಿಂದ ಸುಳ್ಳು ದೂರು ದಾಖಲಿಸಲಾಗಿದೆ ಎಂದರು.

ವಿಚಾರಣೆ ಎದುರಿಸುತ್ತಿರುವ ಎಸಿಪಿ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಪ್ರಕರಣ ಸಂಬಂಧದ ತನಿಖೆಗೆ ಎಸಿಪಿ ಹಾಜರಾಗುತ್ತಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಒಬ್ಬರು ಮಾತ್ರ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ಜಾಮೀನು
ಬೆಂಗಳೂರು:
ಶಾಸಕ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಜಾಮೀನು ಕೋರಿ ನೂರ್ ಖಾನ್, ಅಕ್ರಮ್, ಸೈಯದ್‌ ಮುಹೀಬ್ ಮತ್ತು ಅಬ್ದುಲ್ಲಾ ಬೇಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ತನ್ವೀರ್ ಸೇಠ್ 2019ರ ನವೆಂಬರ್ 17ರಂದು ಬನ್ನಿಮಂಟಪ ಆವರಣದಲ್ಲಿ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಅಂದು ರಾತ್ರಿ 11.15ರ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.

ಗುಡಿಸಿಲಿಗೆ ಬೆಂಕಿ: ಸ್ವಯಂಪ್ರೇರಿತ ಪಿಐಎಲ್
ಬೆಂಗಳೂರು:
ಕಾಚರಕನಹಳ್ಳಿ ಬಳಿಯ ಸಂಡೇ ಬಜಾರ್ ಕೊಳೆಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ ಗುಡಿಸ ಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.

ಹೈಕೋರ್ಟ್ ವಕೀಲೆ ವೈಶಾಲಿ ಹೆಗಡೆ ಬರೆದ ಪತ್ರವನ್ನು ಆಧರಿಸಿ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ನಿರ್ದೇಶಿಸಿದೆ. ‘ಲಾಕ್ ಡೌನ್ ಸಡಿಲಿಕೆ ನಂತರ ಬಹುತೇಕ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಿರುವ ಕಾರಣ ಕೆಲವು ದುಷ್ಕರ್ಮಿಗಳು ಅವರು ವಾಸಿಸುತ್ತಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ’ ಎಂದು ವೈಶಾಲಿ ಹೆಗಡೆ ಪತ್ರದಲ್ಲಿ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು