ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ 75 ಸಾವಿರ ಕೊರೊನಾ ಸೋಂಕಿತರು ಗುಣಮುಖ

ಬೆಂಗಳೂರಿನಲ್ಲಿ ಒಂದೇ ದಿನ 61 ಸಾವು
Last Updated 25 ಆಗಸ್ಟ್ 2020, 21:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ 1,538 ಮಂದಿ ಗುಣಮುಖರಾಗುವುದರೊಂದಿಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 75 ಸಾವಿರ ಹತ್ತಿರ (74,901) ತಲುಪಿದೆ.

ಹೊಸದಾಗಿ 2,294 ಮಂದಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ಒಟ್ಟು 1,12,087 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು ಒಂದೇ ದಿನ 61 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟು 1,755 ಮಂದಿ ಕೋವಿಡ್‌ನಿಂದ ಸಾವಿಗೀಡಾದಂತಾಗಿದೆ. 327 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

35,430 ಸೋಂಕಿತರು ಆಸ್ಪತ್ರೆಗಳಲ್ಲಿ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಗೂ ಮನೆಯಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಕೆಲವು ಕೇಂದ್ರಗಳು ಸ್ಥಗಿತ

ಬಹಳಷ್ಟು ಜನರು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಲು ಬಯಸುತ್ತಿರುವುದರಿಂದ ನಗರದಲ್ಲಿನ ಕೆಲವು ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯ ಸ್ಥಗಿತಗೊಳಿಸಲು ಅಥವಾ ಮುಚ್ಚಲು ನಿರ್ಧರಿಸಲಾಗಿದೆ.

ನಗರದ ಅತಿ ದೊಡ್ಡ ಕೋವಿಡ್‌ ಆರೈಕೆ ಕೇಂದ್ರ ಎನಿಸಿರುವ ಬಿಐಇಸಿಯಲ್ಲಿ 1,500 ಹಾಸಿಗೆ ಮಾತ್ರ ರೋಗಿಗಳಿಗೆ ನೀಡಲಾಗುತ್ತಿದೆ. ಬಹಳಷ್ಟು ರೋಗಿಗಳು ಮನೆಯಲ್ಲಿ ಆರೈಕೆ ಮಾಡಿಕೊಳ್ಳಲು ಬಯಸುತ್ತಿರುವುದರಿಂದ 550 ಮಂದಿ ಮಾತ್ರ ದಾಖಲಾಗಿದ್ದಾರೆ.

ನಗರದಲ್ಲಿ ಈಗಲೂ 34,735 ಸಕ್ರಿಯ ಪ್ರಕರಣಗಳು ಇವೆ. ಆದರೆ, ಎಲ್ಲ 12 ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 2,786 ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 1,790 ಹಾಸಿಗೆಗಳು ಖಾಲಿ ಇವೆ.

ಬಿಬಿಎಂಪಿ ಪೋರ್ಟಲ್‌ನ ಅಂಕಿ–ಅಂಶದ ಪ್ರಕಾರ, ಜುಲೈ 1ರಿಂದ ಆಗಸ್ಟ್‌ 18ರವರೆಗೆ ಒಟ್ಟು 92,212 ಪ್ರಕರಣಗಳು ವರದಿಯಾಗಿವೆ. ಈ ಪೈಕಿ, ಶೇ 39ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಶೇ 35.1ರಷ್ಟು ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಶೇ 15.1ರಷ್ಟು ಮಂದಿ ಮಾತ್ರ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಶೇ 5ರಷ್ಟು ಮಂದಿ ಇದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲು ಆದ್ಯತೆ ನೀಡಲಾಗುತ್ತಿದೆ. ಉಳಿದವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಆರೈಕೆ ಪಡೆಯಬಹುದಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ.

‘ಜ್ಞಾನಭಾರತಿ ಕ್ಯಾಂಪಸ್‌ ಹಾಗೂ ಜಿಕೆವಿಕೆ ಕ್ಯಾಂಪಸ್‌ನಲ್ಲಿನ ಆರೈಕೆ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ’ ಎಂದು ಈ ಕೇಂದ್ರಗಳ ಉಸ್ತುವಾರಿ, ಐಎಎಸ್‌ ಅಧಿಕಾರಿ ರಾಜೇಂದ್ರ ಕಟಾರಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT