ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ 50 ವರ್ಷದ ಅಭಿವೃದ್ಧಿಗೆ ಯೋಜನೆ: ಸಿಎಂ ಬೊಮ್ಮಾಯಿ ಭರವಸೆ

ಗೋವಿಂದರಾಜನಗರ: ವಿವಿಧ ಕಾಮಗಾರಿಗಳ ಭೂಮಿಪೂಜೆ, ಸೌಕರ್ಯಗಳ ಉದ್ಘಾಟನೆ ವೇಳೆ ಸಿಎಂ ಭರವಸೆ
Last Updated 12 ಸೆಪ್ಟೆಂಬರ್ 2021, 19:11 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ. ಮುಂದಿನ 50 ವರ್ಷಗಳಲ್ಲಿ ಬೆಂಗಳೂರು ಹೇಗಿರಬೇಕು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆ ರೂಪಿಸಲಿದ್ದೇವೆ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಬಿಎಂಪಿಯು ಜಿ.ಕೆ.ಡಬ್ಲ್ಯು ಬಡಾವಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಸೌಕರ್ಯಗಳ ಉದ್ಘಾಟನೆ ನೆರವೇರಿಸಿ ಅವರು ಭಾನುವಾರ ಮಾತನಾಡಿದರು.

‘ನಗರದಲ್ಲಿ ಯಾವ ವಲಯದ ಅಭಿವೃದ್ಧಿಗೆ ಏನೇನು ಬೇಕು ಎಂಬ ಸಮಗ್ರ ಮಾಹಿತಿಯನ್ನು ಸಂಗ್ರಹಿಸುತ್ತೇನೆ. ನಾಗರಿಕ ಸೇವೆಗಳು ಮನೆ ಬಾಗಿಲಿನಲ್ಲೇ, ಬೆರಳ ತುದಿಯಲ್ಲೇ ಸಿಗುವಂಥ ವಿನೂತನ
ಯೋಜನೆ ಜಾರಿಗೊಳಿಸುತ್ತಿದ್ದೇವೆ. ಹೊಸ ತಂತ್ರಾಂಶವನ್ನೂ ಇದಕ್ಕಾಗಿ ಬಳಕೆ ಮಾಡುತ್ತೇವೆ’ ಎಂದರು.

‘ನಗರದಲ್ಲಿ ನಿವೇಶನದಾರರು ಮನೆ ನಿರ್ಮಾಣಕ್ಕೆ ಸಂಬಂಧಿಸಿ ಅನೇಕಕಾನೂನು ತೊಂದರೆ ಎದುರಿಸುತ್ತಿದ್ದಾರೆ. ಅವುಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಸಂಬಂಧಪಟ್ಟವರ ಜೊತೆಗೂ ವಿವರವಾಗಿ ಚರ್ಚಿಸಿದ್ದೇವೆ. ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ನೀಡಲಿದ್ದೇವೆ. ಕೆಲವರಿಗೆ ಮನೆ ಇದ್ದರೂ, ದಾಖಲೆಗಳಿಲ್ಲ. ಅದನ್ನೂ ನೀಡಲಿದ್ದೇವೆ’ ಎಂದರು.

‘ನಗರದಲ್ಲಿ ಅತಿ ವಾಹನ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಕೆಲಸ ಆರಂಭವಾಗಿದೆ. ನಿರ್ಭಯ ಯೋಜನೆ ಅಡಿ ನಗರದಾದ್ಯಂತ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಸ್ವತಂತ್ರವಾದ ಆರೋಗ್ಯ ವ್ಯವಸ್ಥೆ: ‘ಬೆಂಗಳೂರಿಗೆ ಸ್ವತಂತ್ರ ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ. ಇದರ ಜಾರಿಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಮೂಲಸೌಕರ್ಯ ಒದಗಿಸಲು ಒತ್ತು ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

‘ಕೋವಿಡ್‌ ವ್ಯಾಪಿಸಿದಾಗ ನೂರಿನ್ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳನ್ನು ಪ್ರತಿ ವಲಯದಲ್ಲೂ ನಿರ್ಮಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಸಾಮಾನ್ಯ ಜನರಿಗೆ, ಕಡುಬಡವರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆ ತೆರೆಯುವ ಯೋಜನೆ ರೂಪಿಸಲಿದ್ದೇವೆ’ ಎಂದರು.

‘ಕ್ಷೇತ್ರದ ಶಾಸಕ ವಿ. ಸೋಮಣ್ಣ ಅವರಷ್ಟು ವೇಗವಾಗಿ ನಾವು ಕೆಲಸ ಮಾಡಲಾಗದು. ಅವರ ವಯಸ್ಸು 70 ದಾಟಿದೆ. ಆದರೆ, 20ರ ವಯಸ್ಸಿನವರಂತೆ ಉತ್ಸಾಹದಿಂದ ಕೆಲಸ ಮಾಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಸತಿ ಸಚಿವ ವಿ.ಸೋಮಣ್ಣ, ‘ಇನ್ನೆರಡು ತಿಂಗಳುಗಳಲ್ಲಿ ಬೆಂಗಳೂರಿ
ನಲ್ಲಿ ಸೂರಿಲ್ಲದ 65 ಸಾವಿರ ಮಂದಿಗೆ ಸೂರು ಕಲ್ಪಿಸಲಿದ್ದೇವೆ. ಎಂ.ಸಿ ಬಡಾವಣೆ
ಯಲ್ಲಿ 295 ಹಾಸಿಗೆ ಆಸ್ಪತ್ರೆ ನಿರ್ಮಿಸುತ್ತಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಪಂತರಪಾಳ್ಯದಲ್ಲೂ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ’ ಎಂದರು.

ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ನಿರಂಜನಾರಾಧ್ಯ ಸ್ವಾಮಿ, ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸಚಿವರಾದ ಆರ್‌.ಅಶೋಕ, ಕೆ.ಸುಧಾಕರ್‌, ಬಿ.ಎ.ಬಸವರಾಜ, ಮುನಿರತ್ನ, ಗೋಪಾಲಯ್ಯ, ಸಂಸದ ತೇಜಸ್ವಿಸೂರ್ಯ, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಅ. ದೇವೇಗೌಡ, ಎಚ್‌.ಎನ್‌. ರಮೇಶ್‌ ಗೌಡ ಇದ್ದರು.

ಡಯಾಲಿಸಿಸ್ ಆಸ್ಪತ್ರೆ ಉದ್ಘಾಟನೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ನವೀಕರಣ, ಪಂತರಪಾಳ್ಯದಲ್ಲಿ 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,‌ ನಾಯಂಡಹಳ್ಳಿಯ ವಾರ್ಡ್ ಕಚೇರಿ, ಪಂತರಪಾಳ್ಯದಲ್ಲಿ ಶಾಲಾ ಕಟ್ಟಡ,‌ ನಾಗರಭಾವಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರ್.ಕೆ.ಉರ್ದು ಶಾಲೆಗಳಿಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ನೆರವೇರಿಸಿದರು.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಡಯಾಲಿಸಿಸ್ ಆಸ್ಪತ್ರೆ, ಉದ್ಯಾನವನ ಹಾಗೂ ಸ್ಕೇಟಿಂಗ್ ಟ್ರ್ಯಾಕ್‌ ಉದ್ಘಾಟಿಸಿದರು. ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಅಗ್ರಹಾರ‌ ದಾಸರಹಳ್ಳಿ ವಾರ್ಡ್‌ನಲ್ಲಿ ಪ್ರಾಥಮಿಕ‌, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

***

ಬೆಂದಕಾಳೂರು ಬೆಂಗಳೂರು ಮಹಾನಗರವಾಗಿ, ಬೃಹತ್‌ ಬೆಂಗಳೂರು ಆಗಿ ಬೆಳೆದಿದೆ. ನಗರಕ್ಕೆ ಹೊಸ ನೋಟ ಕೊಟ್ಟು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT