ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಪದಿಂದ ವರ್ತಿಸಿದರೆ ಶಿಸ್ತುಕ್ರಮ: ಜನಸ್ನೇಹಿಯಾಗಿರಲು ಪೊಲೀಸರಿಗೆ ಸಿಎಂ ತಾಕೀತು

Published 15 ಸೆಪ್ಟೆಂಬರ್ 2023, 10:28 IST
Last Updated 15 ಸೆಪ್ಟೆಂಬರ್ 2023, 10:28 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ಎದುರು ದರ್ಪ ದಿಂದ ವರ್ತಿಸುವುದನ್ನು ಪೊಲೀಸರು ಬಿಡಬೇಕು. ಜನಸ್ನೇಹಿಯಾಗಿ ಪ್ರತಿಯೊಬ್ಬರ ದೂರುಗಳನ್ನು ಗೌರವ ಯುತವಾಗಿ ಆಲಿಸಬೇಕು. ಆಕಸ್ಮಾತ್ ದರ್ಪದಿಂದ ವರ್ತಿಸುವುದು ಮುಂದುವರಿದರೆ, ಶಿಸ್ತುಕ್ರಮ ಎದುರಿಸ ಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಪಿಎಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಐಪಿಎಸ್ ಹಿರಿಯ ಅಧಿಕಾರಿಗಳ ವಾರ್ಷಿಕ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವ್ಯವಸ್ಥೆಯಲ್ಲಿ ಬದಲಾವಣೆ ಬಯಸಿ ಜನರು ನಮಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ, ಪೊಲೀಸರಿಂದಲೂ ನಾವು ಬದಲಾವಣೆ ಬಯಸುತ್ತೇವೆ. ನನ್ನ ಅನುಭವದಿಂದ ಹೇಳುವುದಾದರೆ, ಹಲವು ಪೊಲೀಸರು ದರ್ಪದಿಂದ ವರ್ತಿಸುತ್ತಾರೆ. ಇಂಥ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯುವುದಿಲ್ಲ. ದರ್ಪದಿಂದ ವರ್ತಿಸುವ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮ ನಿಶ್ಚಿತ’ ಎಂದು ತಾಕೀತು ಮಾಡಿದರು.

‘ಬಡವ– ಶ್ರೀಮಂತ, ದೊಡ್ಡವ–ಸಣ್ಣವ ಯಾರೇ ಠಾಣೆಗೆ ಬಂದು ದೂರು ನೀಡಿದರೆ ಎಫ್‌ಐಆರ್ ದಾಖಲಿಸಬೇಕು. ಅವರೊಂದಿಗೆ ಗೌರವವಾಗಿ ನಡೆದು ಕೊಂಡು ನ್ಯಾಯದ ಭರವಸೆಯ ಜೊತೆಗೆ ಆತ್ಮವಿಶ್ವಾಸ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ರೌಡಿಗಳು, ದರೋಡೆಕೋರರು, ಕಳ್ಳತನ ಮಾಡುವವರು, ಸುಳ್ಳು ಸುದ್ದಿ ಹಬ್ಬಿಸುವವರು, ಕ್ಲಬ್‌ ನಡೆಸುವವರು, ಬೆಟ್ಟಿಂಗ್ ಆಡಿಸುವವರು ಹಾಗೂ ಇತರೆ ಅಪರಾಧ ಕೃತ್ಯ ಎಸಗುವವರು ಇದ್ದಾರೆ. ಇವರೆಲ್ಲರ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ಕೆಲಸ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ’ ಎಂದರು.

ಡ್ರಗ್ಸ್ ಮಟ್ಟಹಾಕಲು ವಿಶೇಷ ಅಭಿಯಾನ: ‘ಮಾದಕ ವಸ್ತುವಿನಿಂದ (ಡ್ರಗ್ಸ್) ಯುವ ಸಮುದಾಯ ಹಾಳಾ ಗುತ್ತಿದೆ. ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಹತ್ತಿಕ್ಕಲು ವಿಶೇಷ ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ
ಹೇಳಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಸ್ವಯಂಪ್ರೇರಿತ ಎಫ್‌ಐಆರ್: ‘ಸುಳ್ಳುಸುದ್ದಿ ಹಬ್ಬಿಸುವವರು, ದ್ವೇಷದ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ದೂರುದಾರರು ಇಲ್ಲದಿದ್ದರೆ, ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆಯೂ ಹೇಳಲಾಗಿದೆ’ ಎಂದು ಮಾಹಿತಿ ನೀಡಿದರು.

ಗೃಹ ಸಚಿವ ಜಿ. ಪರಮೇಶ್ವರ, ರಜನೀಶ್ ಗೋಯಲ್, ಗೃಹ ಇಲಾ ಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಇದ್ದರು.

‘ಎಸ್‌ಪಿ, ಡಿಸಿಪಿಗಳು ಹೊಣೆ’

‘ಠಾಣಾಧಿಕಾರಿ ಗಮನಕ್ಕೆ ಬಾರದಂತೆ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ನಡೆಯುವುದಿಲ್ಲ. ಹೀಗಾಗಿ, ಠಾಣಾಧಿಕಾರಿಗಳೇ ಅಪರಾಧ ಹತ್ತಿಕ್ಕಬೇಕು. ಹಲವು ಸಂದರ್ಭಗಳಲ್ಲಿ ಕೆಳ ಹಂತದ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ಆದರೆ, ಇನ್ನು ಮುಂದೆ ಕಾನೂನು ಸುವ್ಯವಸ್ಥೆ ಕಾಪಾಡದಿದ್ದರೆ ಸಂಬಂಧಪಟ್ಟ ಎಸ್‌ಪಿ ಹಾಗೂ ಡಿಸಿಪಿಗಳನ್ನೇ ಹೊಣೆಯನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT