ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಇದೆ, ವರ್ಗಾವಣೆ ಮಾಡುತ್ತಿದ್ದೇವೆ: ಮುಖ್ಯಮಂತ್ರಿ ಸಮರ್ಥನೆ

‘ಸರ್ಕಾರ ಉಳಿಸಿಕೊಳ್ಳಬೇಕು ಎಂದು ಓಡಿ ಬರಲಿಲ್ಲ; ಗಾಬರಿಯೂ ಆಗಲಿಲ್ಲ’
Last Updated 19 ಜುಲೈ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಇರೋದರಿಂದಲೇ ವರ್ಗಾವಣೆ ನಡೆಯುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ. ವರ್ಗಾವಣೆ ನಿಲ್ಲಿಸಲೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಮೇಲೆ ಮಾತನಾಡಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಅವರು ಸಮರ್ಥಿಸಿಕೊಂಡರು. ಕಳೆದ 10 ದಿನಗಳಲ್ಲಿ 2,000 ಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

‘ ನಾನು ಅಮೆರಿಕಾದಲ್ಲಿ ಇದ್ದಾಗ ಇಲ್ಲಿನ ರಾಜಕೀಯ ವಿದ್ಯಮಾನ ಗಮನಕ್ಕೆ ಬಂದಿತು. ಸರ್ಕಾರ ಉಳಿಸಿಕೊಳ್ಳಬೇಕು ಎಂದಿದ್ದರೆ, ತಕ್ಷಣವೇ ಓಡಿ ಬರುತ್ತಿದೆ. ಹಾಗೆಣದು ಗಾಬರಿಯೂ ಆಗಲಿಲ್ಲ. ಏನು ನಡೆಯುತ್ತಿದೆಯೊ ನಡೆಯಲಿ ಎಂದು ಸುಮ್ಮನೆಯೇ ಇದ್ದೆ. ಅಮೆರಿಕಕ್ಕೆ ಹೊರಡುವ ಮೊದಲೇ ಕುತಂತ್ರಗಳು ನಡೆಯುತ್ತಿದೆ ಹೋಗಬೇಡಿ ಎಂದು ಹೇಳಿದ್ದರು. ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ’ ಎಂದೂ ಅವರು ಹೇಳಿದರು.

‘ನಾನೇನು ಪಾಪದ ಕೆಲಸ ಮಾಡಿದ್ದೇನೆ ಹೇಳಿ. ಪರ್ಸೆಂಟೇಜ್‌ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ಈ ಪದ್ಧತಿ ಎಲ್ಲಿಂದ ಶುರುವಾಯಿತು ಎನ್ನೋದನ್ನು ಬಿಚ್ಚಿಡಲೇ’ ಎಂದು ಕುಮಾರಸ್ವಾಮಿ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಎಚ್‌.ಡಿ.ರೇವಣ್ಣ ಮಾತನಾಡಿ, ‘ಯಾರ್‍ಯಾರ ಕಾಲದಲ್ಲಿ ಪರ್ಸೆಂಟೇಜ್‌ ನಡೆದಿದೆ ಎಂಬುದನ್ನು ಹೇಳ್ಬೇಕೇನ್ರಿ. ನಾನು ಮಂತ್ರಿ ಆಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಹೇಳಿ. ನಾನೂ ಚರಿತ್ರೆ ಬಿಚ್ಚಿಡಲು ರೆಡಿ ಇದ್ದೇನೆ’ ಎಂದರು.

‘ನಾನು ಯಾರಿಗೂ ಮಂತ್ರಿಗಿರಿ ಹಂಚಲು ಹೋಗಿಲ್ಲ. ಇಂತಹವರಿಗೆ ಇಂತಹ ಖಾತೆ ಕೊಡಿ ಎಂದೂ ಹೇಳಿಲ್ಲ. ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯ ಉಸಬಾರಿಗೂ ಹೋಗಿಲ್ಲ. ನನ್ನ ಜಿಲ್ಲೆ ಜನ ನೊಂದಿದ್ದಾರೆ. ಅವರಿಗಾಗಿ ಕೆಲಸ ಮಾಡಿದ್ದೇನೆ’ ಎಂದು ರೇವಣ್ಣ ಹೇಳಿದರು.

‘ಸೈನ್‌ ಹಾಕಿಸದೇ ಕೆಲಸ ಮಾಡಿಸೋ ನ್ಯಾಕ್‌ ಗೊತ್ತಿರೋದು ರೇವಣ್ಣ ಅವರಿಗೆ ಮಾತ್ರ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ‘ಬಡವರ ಕೆಲಸ ಆಗಬೇಕಿದ್ದರೆ, ಸೈನ್‌ ಇಲ್ಲದೆಯೂ ಮಾಡಿಸ್ತೀನಿ’ ಎಂದು ರೇವಣ್ಣ ಸಮಜಾಯಿಷಿ ನೀಡಿದರು.

‘2ನೇ ಲವ್‌ ಲೆಟರ್‌ ಕಳಿಸಿದ್ದಾರೆ’

‘ರಾಜ್ಯಪಾಲರು ಎರಡನೇ ಲವ್‌ ಲೆಟರ್‌ ಕಳಿಸಿದ್ದಾರೆ. ಅದರಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ. ರಾಜ್ಯಪಾಲರಿಗೆ 10 ದಿನಗಳ ಬಳಿಕ ಜ್ಞಾನೋದಯವಾಗಿದೆಯೇ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

‘ಕುದುರೆ ವ್ಯಾಪಾರ ನಡೆಯುತ್ತಿರುವುದು ಟಿ.ವಿ ನೋಡಿದಾಗಲೂ ಅವರ ಗಮನಕ್ಕೆ ಬರಲಿಲ್ಲವೆ ’ ಎಂದೂ ಅವರು ಕುಟುಕಿದರು. ‘ನಾನೂ ಯಾವುದಕ್ಕೂ ಅಂಜುವುದಿಲ್ಲ. ಕದ್ದುಮುಚ್ಚಿ ಮಾಡುವವನೂ ಅಲ್ಲ. ಏನು ಮಾಡುವುದಿದ್ದರೂ ಧೈರ್ಯವಾಗಿ ಮಾಡುವವನು. ರಾಜಕೀಯ ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದೇನೆ. ಒಳ್ಳೆಯದ್ದನ್ನೂ ಮಾಡಿದ್ದೇನೆ. ಹಿಂದೆ ತಂದೆಯವರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದು ತಪ್ಪು ಮಾಡಿದ್ದೇನೆ. ತಂದೆಗೆ ಕಪ್ಪು ಚುಕ್ಕೆ ಇಟ್ಟಿದ್ದೇನೆ’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT