ಬುಧವಾರ, ಸೆಪ್ಟೆಂಬರ್ 23, 2020
26 °C

ಆ. 20ರ ಒಳಗೆ ಸಿಇಟಿ ಫಲಿತಾಂಶ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಇದೇ 20ರ ಒಳಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಎಂದಿನಂತೆಯೇ ನಡೆಯಲಿದೆ. ಸಿಇಟಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೀಟು ಹಂಚಿಕೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಸುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವಿನ ಸೀಟು ಹಂಚಿಕೆ ಕುರಿತು ವಾರದಲ್ಲಿ ತೀರ್ಮಾನಕ್ಕೆ ಬರಲಿದ್ದೇವೆ. ಈ ಪ್ರಕ್ರಿಯೆಯಲ್ಲಿ ಹೆಚ್ಚೇನೂ ವ್ಯತ್ಯಾಸ ಇರುವುದಿಲ್ಲ’ ಎಂದರು.

ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ಕಡಿಮೆ ಮಾಡುವಂತೆ  ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ಸಾಲಿನಲ್ಲಿ ಯಾವುದೇ ಕೋರ್ಸ್‌ಗಳ ಶುಲ್ಕ ಹೆಚ್ಚಿಸದಂತೆ ಆಡಳಿತ ಮಂಡಳಿಯವರಲ್ಲಿ ಕೋರುತ್ತೇನೆ’ ಎಂದರು.

ನವೋದ್ಯಮಗಳಿಗೆ ನಷ್ಟ: ‘ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಅಷ್ಟೇನೂ ನಷ್ಟ ಉಂಟಾಗಿಲ್ಲ. ಆದರೆ, ನವೋದ್ಯಮಗಳು ಸಮಸ್ಯೆ ಎದುರಿಸಿದ್ದು ನಿಜ. ಕಾರ್ಯಾಚರಣೆ ಕಡಿತಗೊಳಿಸಿ ನಷ್ಟವನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ ನವೋದ್ಯಮಗಳು ತೊಡಗಿವೆ. ಅವುಗಳ ಸಂಕಷ್ಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸ್ಪಂದಿಸಿವೆ. ನಷ್ಟದಲ್ಲಿರುವ ಉದ್ಯಮಗಳಿಗೆ ಸಾಲವನ್ನೂ ಒದಗಿಸಲಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಅಶ್ವತ್ಥನಾರಾಯಣ ತಿಳಿಸಿದರು.

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ, ಅದರಲ್ಲೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ನೀಡಿದ ಉತ್ತಮ ಸೇವೆಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆಗಳ ಬೇಡಿಕೆಗೆ ಸ್ಪಂದಿಸುವ ಮೂಲಕ ಸರ್ಕಾರ ಅಗತ್ಯ ನೆರವು ನೀಡಿದೆ. ದೂರಸಂಪರ್ಕ ಮೂಲಸೌಕರ್ಯವನ್ನು ಹೆಚ್ಚಿಸುವಂತೆ ಈ ಸಂಸ್ಥೆಗಳು  ಬೇಡಿಕೆ ಸಲ್ಲಿಸಿದ್ದವು. ಮೂಲದಲ್ಲೇ ಕಡಿತ ಮಾಡಿರುವ ತೆರಿಗೆಯ ಮರುಪಾವತಿಯನ್ನು ತ್ವರಿತವಾಗಿ ಮಾಡುವಂತೆ ಹಾಗೂ ಆದಾಯ ತೆರಿಗೆ ಪಾವತಿಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಕೋರಿದ್ದವು. ಈ ಬೇಡಿಕೆಗಳಿಗೆಲ್ಲ ಕೇಂದ್ರ ಸರ್ಕಾರ ಸ್ಪಂದಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು