ಗುರುವಾರ , ಸೆಪ್ಟೆಂಬರ್ 23, 2021
20 °C

ವಿಜ್ಞಾನಕ್ಕೆ ಒತ್ತು ನೀಡಿದರೆ ಸಮಾಜಕ್ಕೆ ಒಳಿತು: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಕರ್ನಾಟಕವು ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಮೂರು ಮಾರ್ಗಗಳಲ್ಲಿ ಸಾಗಿದಾಗ ನಮ್ಮ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ 28ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಂಗಳವಾರ ಮಾತನಾಡಿದರು.

‘ವಿಜ್ಞಾನವೇ ಜೀವನ, ಸಂಸ್ಕಾರ ಹಾಗೂ ಸಂಸ್ಕೃತಿ ಆಗಬೇಕು. ಈ ಹಾದಿಯಲ್ಲಿ ನಾವು ಸಾಗಬೇಕು. ನಮ್ಮಲ್ಲಿರುವ ಎಲ್ಲಾ  ಸಂಪನ್ಮೂಲಗಳನ್ನೂ ಈ ದಿಶೆಯಲ್ಲೇ ಬಳಕೆ ಮಾಡಬೇಕು’ ಎಂದರು.

‘ಸಂಖ್ಯೆಯಿಂದ ಏನೂ ಪ್ರಯೋಜನವಿಲ್ಲ. ಶಕ್ತಿಯಿಂದ ಮಾತ್ರ ಇಡೀ ವಿಶ್ವವನ್ನು ಆಳಲು ಸಾಧ್ಯ. ಅಸಹಾಯಕಾರಿಯಾಗಿದ್ದುಕೊಂಡು  ಸಮಾಜಕ್ಕೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದಿರುವ ದೇಶಗಳಲ್ಲಿ ಜನಜೀವನ ಉತ್ತಮವಾಗಿರುವುದನ್ನು ನಾವು ಕಾಣಬಹುದು. ಈ ದಿಕ್ಕಿನಲ್ಲಿ ನಾವೆಲ್ಲ ಹೆಜ್ಜೆ ಇಡಬೇಕು. ಇದಕ್ಕಾಗಿ ವಿಜ್ಞಾನ ಪರಿಷತ್‌ಗೆ ಬೇಕಿರುವ ಎಲ್ಲಾ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ’ ಎಂದು ಭರವಸೆ ನೀಡಿದರು.

‘ಶಾಲೆ ಹಾಗೂ ಕಾಲೇಜುಗಳಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸಲು ನಾವು ಮುಂದಾಗಿದ್ದೇವೆ. ನಮ್ಮಲ್ಲಿರುವ ಸಂಪನ್ಮೂಲ ಕ್ರೋಡೀಕರಿಸಿ, ಎಲ್ಲರ ಸಲಹೆ, ಸಹಕಾರ ಪಡೆದು ಮುಂದಡಿ ಇಡುತ್ತೇವೆ. ಇಚ್ಛಾಶಕ್ತಿ ಇದ್ದರೆ ನಾವು ಏನನ್ನಾದರೂ ಸಾಧಿಸಬಹುದು. ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸಬಾರದು. ಯಾರಿಂದಲಾದರೂ ಸಹಾಯ ಪಡೆದು ಗುರಿ ಸಾಧಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಹಾಗಂತ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ. ವಿಜ್ಞಾನ ಪರಿಷತ್‌ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಪರಿಷತ್‌ ಮಾಡುವ ಎಲ್ಲಾ ಕೆಲಸಗಳಿಗೂ ನಮ್ಮ ಸಹಕಾರ ಇರುತ್ತದೆ’ ಎಂದರು.

‘ಪ್ರತಿಯೊಬ್ಬರ ಪ್ರಗತಿ, ಏಳಿಗೆ ಹೀಗೆ ಎಲ್ಲವೂ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಈ ದೇಶದ ಭವಿಷ್ಯ. ಅವರ ಬದುಕು ರೂಪಿಸಲು ನಮ್ಮ ಜೀವನ ಮುಡಿಪಾಗಿಡುತ್ತೇವೆ’ ಎಂದು ತಿಳಿಸಿದರು.

₹2 ಲಕ್ಷ ದತ್ತಿ ನಿಧಿ: ಭಾರತದ ಭಾವಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಆದಿಚುಂಚನಗಿರಿ ವಿಜ್ಞಾನ ದತ್ತಿ ನಿಧಿ ಸ್ಥಾಪಿಸಿದ್ದು, ಕಾರ್ಯಕ್ರಮದಲ್ಲಿ ವಿಜ್ಞಾನ ಪರಿಷತ್‌ಗೆ ₹2 ಲಕ್ಷದ ಚೆಕ್‌ ಹಸ್ತಾಂತರಿಸಿದರು. ಈ ನಿಧಿಯ ಅಡಿಯಲ್ಲಿ ಪ್ರತಿ ವರ್ಷ ಬಾಲ ವಿಜ್ಞಾನಿಗಳಿಗೆ ಬಹುಮಾನ ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು