ಭಾನುವಾರ, ಮೇ 31, 2020
27 °C
ವಲಯ ವಿಂಗಡಣೆ ಪ್ರಕ್ರಿಯೆಯಲ್ಲೇ ಲೋಪ

ಪದವಿ ಕಾಲೇಜು ಉಪನ್ಯಾಸಕರ ಕಡ್ಡಾಯ ವರ್ಗಾವಣೆ: ಒಂದೇ ವಲಯದಲ್ಲಿ ಬೆಂಗಳೂರು–ಶಿರಾ!

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಉಪನ್ಯಾಸಕರನ್ನು ಕಡ್ಡಾಯ ವರ್ಗಾವಣೆ ಮಾಡಲು ಜ್ಯೇಷ್ಠತಾ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪನ್ಯಾಸಕರು, ‘ಮೊದಲು ಶೈಕ್ಷಣಿಕ ವಲಯಗಳ ರಚನೆಯಲ್ಲಿನ ಲೋಪಗಳನ್ನು ಸರಿಪಡಿಸಿ, ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲಿ’ ಎಂದು ಒತ್ತಾಯಿಸಿದ್ದಾರೆ. 

2014ರ ವರ್ಗಾವಣೆಯ ನಿಯಮಾವಳಿ ಅನ್ವಯ ಪದವಿ ಕಾಲೇಜುಗಳಲ್ಲಿನ ಶೇ 8ರಷ್ಟು ಉಪನ್ಯಾಸಕರನ್ನು ವರ್ಗಾವಣೆ ಮಾಡಲು ಇಲಾಖೆ ನಿರ್ಧರಿಸಿದೆ. ‘ಎ’ ವಲಯದಿಂದ ‘ಬಿ’ ವಲಯಕ್ಕೆ, ‘ಬಿ’ ಯಿಂದ ‘ಸಿ’ ವಲಯಕ್ಕೆ, ‘ಸಿ’ ಯಿಂದ ‘ಎ’ ವಲಯಕ್ಕೆ 556 ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ‘ಎ’ಯಿಂದ ವರ್ಗಾವಣೆಗೊಳ್ಳುವವರಿಗೆ ‘ಬಿ’ಯಲ್ಲಿ ಹುದ್ದೆಗಳು ಲಭ್ಯ ಇಲ್ಲದಿದ್ದರೆ, ‘ಸಿ’ ವಲಯಕ್ಕೆ ವರ್ಗ ಮಾಡಲಾಗುತ್ತದೆ. ಅಲ್ಲಿಯೂ ಹುದ್ದೆ ಖಾಲಿ ಇಲ್ಲದಿದ್ದರೆ, ಪುನಃ ‘ಎ’ ವಲಯದ ಕಾಲೇಜಿಗೆ (ಕಾರ್ಯ ನಿರ್ವಹಿಸುತ್ತಿರುವ ಕಾಲೇಜು ಹೊರತುಪಡಿಸಿ) ವರ್ಗಾವಣೆ ಮಾಡಲಾಗುತ್ತದೆ.

ಕೋರಿಕೆ ಮೇರೆಗಿನ ವರ್ಗಾವಣೆಗೆ ಶೇ 4ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದ್ದು, ಅಂಗವಿಕಲರು, ವಿಧವೆಯರು, ಸರ್ಕಾರಿ ಸೇವೆಯಲ್ಲಿರುವ ದಂಪತಿಗಳು, ಗಂಭೀರ ಕಾಯಿಲೆ ಇರುವವರಿಗೆ ಆದ್ಯತೆ ನೀಡಲಾಗಿದೆ.

ಗೊಂದಲವೇನು?: ‘ಎ’ ವಲಯದಲ್ಲಿ ಸುಮಾರು 300 ಕಾಲೇಜುಗಳು, ‘ಬಿ’ನಲ್ಲಿ 70 ಹಾಗೂ ‘ಸಿ’ ವಲಯದಲ್ಲಿ ಉಳಿದ ಕಾಲೇಜುಗಳು ಇವೆ. ಬೆಂಗಳೂರಿನೊಂದಿಗೆ ಶಿಡ್ಲಘಟ್ಟ, ಕೆಜಿಎಫ್‌, ಶಿರಾ, ಚಿಂತಾಮಣಿ, ಗೋಕಾಕ್‌, ಜಮಖಂಡಿ, ಚಳ್ಳಕೆರೆ, ಚನ್ನಪಟ್ಟಣದಂತಹ ಪಟ್ಟಣಗಳೂ ‘ಎ’ನಲ್ಲಿವೆ. ಎ–ಬಿ–ಸಿ ಎಂದು ಕಡ್ಡಾಯವಾಗಿ ವರ್ಗಾವಣೆ ಮಾಡಿದಾಗ, ಕೆಜಿಎಫ್‌, ಚಿಂತಾಮಣಿಯಂತಹ ಊರುಗಳಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡವರು, ಮತ್ತೆ ಅಂತಹದ್ದೇ ಸಣ್ಣ ಪಟ್ಟಣಗಳಿಗೆ ಹೋಗಬೇಕಾಗಿದೆ’ ಎಂದು ಉಪನ್ಯಾಸಕರು ದೂರುತ್ತಿದ್ದಾರೆ.

‘ಎ’ಗಿಂತ ‘ಬಿ’ ಮತ್ತು ‘ಸಿ’ ವಲಯಗಳ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಗಳು ಕಡಿಮೆ. ಕಡ್ಡಾಯ ವರ್ಗಾವಣೆ ಮಾಡಿದಾಗ, ವಿಜ್ಞಾನದ ಬಹುತೇಕ ಉಪನ್ಯಾಸಕರು ಮರಳಿ ‘ಎ’ ವಲಯದ ಕಾಲೇಜುಗಳಿಗೆ ಬರುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಬೆಂಗಳೂರಿನ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳುತ್ತಾರೆ.

‘ಕಳೆದ ವರ್ಷ ಇದೇ ರೀತಿ ಕಡ್ಡಾಯ ವರ್ಗಾವಣೆ ಮಾಡಿದಾಗ, 40 ಉಪನ್ಯಾಸಕರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯಿಂದ ಅವರನ್ನು ಹೊರಗಿಡಲಾಗಿದೆ. ಈ ವರ್ಷವೂ ಮತ್ತೆ 40 ಜನ ಕೆಎಟಿ ಮೊರೆ ಹೋದರೆ, ಅವರನ್ನೂ ಇರುವ ಸ್ಥಾನದಲ್ಲಿಯೇ ಉಳಿಸಬೇಕಾಗುತ್ತದೆ. ಒಟ್ಟಿನಲ್ಲಿ ಈ ಕಡ್ಡಾಯ ವರ್ಗಾವಣೆ ನೀತಿಯೇ ಸರಿಯಿಲ್ಲ’ ಎಂದು ಅವರು ಅಸಮಾಧಾನ ತೋಡಿಕೊಳ್ಳುತ್ತಾರೆ. 

‘ಅಕ್ಟೋಬರ್‌ ಹೊತ್ತಿಗೆ ಪಠ್ಯಬೋಧನೆ ಮುಗಿಸಿ, ಸೆಮಿಸ್ಟರ್‌ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಿದರೆ, ವಿದ್ಯಾರ್ಥಿಗಳಿಗೂ ಅನನುಕೂಲ ಆಗುತ್ತದೆ’ ಎಂದು ದೂರುತ್ತಾರೆ. 

ಶೈಕ್ಷಣಿಕ ವಲಯ ವರ್ಗೀಕರಣ

* ‘ಎ’ ವಲಯ: ಮಹಾನಗರ ಪಾಲಿಕೆ, ನಗರಸಭೆ, ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರಥಮ ದರ್ಜೆ ಕಾಲೇಜುಗಳು

* ‘ಬಿ’ ವಲಯ: ತಾಲ್ಲೂಕು ಕೇಂದ್ರ, ಪುರಸಭೆ ವ್ಯಾಪ್ತಿಯಲ್ಲಿನ ಕಾಲೇಜುಗಳು

* ‘ಸಿ’ ವಲಯ: ‘ಎ’ ಮತ್ತು ‘ಬಿ’ ವಲಯಗಳಿಗೆ ಸೇರದ ಕಾಲೇಜುಗಳು

‘ವರ್ಗವಾಗಿ ಹೊಸ ಉಪನ್ಯಾಸಕರು ಬಂದ ಬಳಿಕ, ಆಯಾ ಕಾಲೇಜಿನಲ್ಲಿನ ಅತಿಥಿ ಉಪನ್ಯಾಸಕರು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿರುದ್ಯೋಗಿ ಆಗುತ್ತಾರೆ’ ಎಂದು ಉಪನ್ಯಾಸಕಿಯೊಬ್ಬರು ಹೇಳುತ್ತಾರೆ.

‘ಬಿ’ ಮತ್ತು ‘ಸಿ’ ವಲಯಕ್ಕೆ ನಿರಾಸಕ್ತಿ
‘ಬಿ’ ಮತ್ತು ‘ಸಿ’ ವಲಯದ ಕಾಲೇಜುಗಳಲ್ಲಿ ಸೌಕರ್ಯಗಳು ಸರಿಯಾಗಿ ಇರುವುದಿಲ್ಲ. ಕುಟುಂಬ ವಾಸ ಮತ್ತು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಇರುವುದಿಲ್ಲ. ಸಾರಿಗೆ ಸೌಲಭ್ಯವೂ ಅಷ್ಟಕ್ಕಷ್ಟೆ. ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ವಲಯಕ್ಕೆ ಬರಲು ಬಹುತೇಕ ಉಪನ್ಯಾಸಕರು ಹಿಂದೇಟು ಹಾಕುತ್ತಾರೆ ಎಂದು ‘ಬಿ’ ವಲಯದ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳುತ್ತಾರೆ.

ಉಪನ್ಯಾಸಕರ ಪ್ರಮುಖ ಬೇಡಿಕೆ

* ಪಿಎಚ್‌.ಡಿ. ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರಿಗೆ ಮತ್ತು ಸ್ವಾಯತ್ತ ಕಾಲೇಜುಗಳ ಉಪನ್ಯಾಸಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಬೇಕು.

* ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಉಪನ್ಯಾಸಕರನ್ನು ಅಂತಹದ್ದೇ ಕೇಂದ್ರಗಳಿಗೆ ವರ್ಗಾಯಿಸಬೇಕು.

* ತಜ್ಞರ ಸಮಿತಿಯನ್ನು ನೇಮಿಸಿ ವರ್ಗಾವಣೆ ನಿಯಮಾವಳಿಯನ್ನು ಪುನರ್‌ರಚಿಸಬೇಕು.

ಅಂಕಿ–ಅಂಶ

412‌ – ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು

5,400 – ಕಾಲೇಜುಗಳಲ್ಲಿರುವ ಉಪನ್ಯಾಸಕರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು