ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದಲ್ಲಿ ಮಧ್ಯರಾತ್ರಿವರೆಗೂ ಗದ್ದಲ; ಸ್ಥಳೀಯರಿಗಿಲ್ಲ ನಿದ್ದೆ

ಅಕ್ರಮವಾಗಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆ– ಹೈರಾಣಾದ ನಾಗರಿಕರು
Last Updated 18 ಜೂನ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುವ ವಾಣಿಜ್ಯ ಚಟುವಟಿಕೆಯಿಂದ ನಗರದ ನಿವಾಸಿಗಳು ಮನೆಯಲ್ಲೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ತಡರಾತ್ರಿವರೆಗೂ ಜನಜಂಗುಳಿ, ಶಬ್ದ ಮಾಲಿನ್ಯ, ಕಸದ ಸಮಸ್ಯೆ ಹಾಗೂ ಸಂಚಾರ ದಟ್ಟಣೆ ಮುಂತಾದ ಸಮಸ್ಯೆಗಳಿಂದಾಗಿ ಈ ಪ್ರದೇಶಗಳಲ್ಲಿ ನೆಲೆಸಿರುವವರ ಶಾಂತಿಗೆ ಧಕ್ಕೆ ಉಂಟಾಗುತ್ತಿದೆ.

ಪರಿಷ್ಕೃತ ನಗರ ಮಹಾ ಯೋಜನೆ 2015ರ ಪ್ರಕಾರ ನಗರದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ ಯಾವುದೇ ತರಹದ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು. ಇಲ್ಲಿ ವಾಣಿಜ್ಯ ಮಳಿಗೆಗಳಿಗೆ ಪರವಾನಗಿ ನೀಡಬಾರದು ಎಂದು ರಾಜ್ಯದ ಹೈಕೋರ್ಟ್‌ ಸ್ಪಷ್ಟವಾಗಿ ಆದೇಶ ಮಾಡಿದೆ. ಆದರೆ, ಈ ಆದೇಶ ಪಾಲನೆ ಆಗುತ್ತಿಲ್ಲ.

ವಸತಿ ಉದ್ದೇಶಕ್ಕೆ ಮೀಸಲಿಟ್ಟಿರುವ ಪ್ರದೇಶಗಳಲ್ಲಿ ಮಿತಿ ಮೀರಿದ ವಾಣಿಜ್ಯ ಚಟುವಟಿಕೆಗಳಿಂದ ಜನರ ಬದುಕು ದಯನೀಯವಾಗುತ್ತಿದೆ. ‌ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳು ಹೆಚ್ಚುತ್ತಿರುವುದರಿಂದ ನೀರು ಪೂರೈಕೆ ಹಾಗೂ ಒಳಚರಂಡಿ ಮತ್ತಿತರ ಮೂಲಸೌಕರ್ಯಗಳ ಮೇಲೂ ಹೆಚ್ಚಿನ ಒತ್ತಡ ಉಂಟಾಗುತ್ತಿದೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆಯೇ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಪರವಾನಗಿ ನೀಡುತ್ತಿದ್ದಾರೆ ಎಂಬುದು ನಾಗರಿಕರ ದೂರು.

‘ಕೆಲವು ಬೀದಿಗಳಲ್ಲಿ ಹತ್ತಕ್ಕೂ ಅಧಿಕ ಬಾರ್ ಹಾಗೂ ಪಬ್‌ಗಳಿವೆ. ಇಲ್ಲಿ ಕಿವಿಗಡಚಿಕ್ಕುವ ಶಬ್ದದಿಂದ ರಾತ್ರಿ ನಿದ್ರಿಸಲೂ ಸಾಧ್ಯವಾಗುತ್ತಿಲ್ಲ. ಕುಡುಕರ ಹಾವಳಿಯಿಂದಲೂ ನೆಮ್ಮದಿಗೆ ಭಂಗ ಉಂಟಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಇಂದಿರಾನಗರದ ನಿವಾಸಿಯೊಬ್ಬರು ಸಮಸ್ಯೆ ಹೇಳಿಕೊಂಡರು.

‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ ಎಂದು ಪಾಲಿಕೆ 2016ರಲ್ಲಿ ಪ್ರಕಟಣೆ ನೀಡಿತ್ತು. ಯಾರಾದರೂ ಪರವಾನಗಿ ಪಡೆಯದೆಯೇ ಅಂಗಡಿ ನಡೆಸುತ್ತಿದ್ದರೆ ತೆರವುಗಳಿಸಬೇಕು ಎಂದೂ ಸೂಚಿಸಿತ್ತು. ಇದಾಗಿ ಮೂರು ವರ್ಷಗಳು ಕಳೆದರೂ ಪರಿಸ್ಥಿತಿ ಹಾಗೆಯೇ ಇದೆ. ನಾವು ಎಷ್ಟೆಲ್ಲಾ ಪ್ರತಿಭಟನೆ ವ್ಯಕ್ತಪಡಿಸಿದರೂ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಇಂದಿರಾನಗರ ನಿವಾಸಿ ಸ್ನೇಹಾ ನಂದಿಹಾಳ್‌.

ಅನಧಿಕೃತ ಅಂಗಡಿ ಮಳಿಗೆಗಳು, ಪಬ್, ಬಾರ್, ಹೋಟೆಲ್‌ಗಳಿಂದಾಗಿ ಹೈರಾಣಾಗಿದ್ದ ಇಂದಿರಾನಗರದ ನಿವಾಸಿಗಳು ‘ಐ ಚೇಂಜ್‌ ಇಂದಿರಾನಗರ’ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು.

ಸಚಿವರು ಸೂಚನೆ ನೀಡಿದ ಬಳಿಕ ಮಲ್ಲೇಶ್ವರ, ಮಹದೇವಪುರ, ಇಂದಿರಾನಗರ, ಆರ್‌ಎಂವಿ ಬಡಾವಣೆ, ಕೋರಮಂಗಲ ಮತ್ತಿತರ ಕಡೆ ಪಾಲಿಕೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಅಕ್ರಮವಾಗಿ ನಡೆಸುತ್ತಿದ್ದ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದರು.

‘ಇಂದಿರಾನಗರದಲ್ಲೂ ಪಾಲಿಕೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಕೆಲವು ಮಳಿಗೆಗಳನ್ನು ಮುಚ್ಚಿಸಿದ್ದರು. ಬಳಿಕ ಅವರು ಎಂದಿನಂತೆಯೇ ಕಾರ್ಯಾಚರಿಸುತ್ತಿವೆ. ಅವುಗಳ ಮೇಲೆ ಕಣ್ಣಿಡುವ ವ್ಯವಸ್ಥೆ ಬಿಬಿಎಂಪಿಯಲ್ಲಿ ಇಲ್ಲ’ ಎನ್ನುತ್ತಾರೆ ಸ್ಥಳೀಯರು.

ಕೆಲವು ವ್ಯಾಪಾರೋದ್ಯಮಿಗಳು ಉದ್ದಿಮೆ ಪರವಾನಗಿ ಪಡೆಯದೆಯೇ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ನಡೆಸಿದ ದಿಢೀರ್‌ ದಾಳಿ ವೇಳೆ ಇಂತಹ ಅನೇಕ ಬೆಳಕಿಗೆ ಬಂದಿದ್ದವು.

‘ವಲಯ ನಿಬಂಧನೆ ರೂಪಿಸುವುದು ಏಕೆ’

‘ಮನಬಂದಂತೆ ಎಲ್ಲೆಂದರಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದಾದರೆ, ಸರ್ಕಾರ ವಲಯ ನಿಬಂಧನೆಗಳನ್ನು ರೂಪಿಸುವುದಾದರೂ ಏಕೆ. ಯೋಜನೆಯ ಕರಡು ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸುವುದಾದರೂ ಏಕೆ’ ಎಂದು ಪ್ರಶ್ನೆ ಮಾಡುತ್ತಾರೆ ಸ್ನೇಹಾ ನಂದಿಹಾಳ್‌.

‘ಯಾವುದೇ ನಿಯಮ ರೂಪಿಸಿದರೂ ಅದು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ವಸತಿ ಪ್ರದೇಶಗಳನ್ನು ಗುರುತಿಸಿದ ಬಳಿಕ ಅದು ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರ್ಕಾರದ್ದು. ಇದು ಆಗುತ್ತಿಲ್ಲ. ವಸತಿ ಪ್ರದೇಶದಲ್ಲಿ ಮಳಿಗೆಗಳನ್ನು ಹೊಂದಿರುವ ವರ್ತಕರಿಗೆ ಜನಪ್ರತಿನಿಧಿಗಳ ಶ್ರೀರಕ್ಷೆಯೂ ಇದೆ. ಹಾಗಾಗಿ ಅಧಿಕಾರಿಗಳೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ’ ಎಂದು ಅವರು ದೂರಿದರು.

ವಾಣಿಜ್ಯೀಕರಣ ಕುರಿತ ಚರ್ಚೆ 22ಕ್ಕೆ

ವಸತಿ ಪ್ರದೇಶಗಳು ವಾಣಿಜ್ಯ ಪ್ರದೇಶಗಳಾಗಿ ಬದಲಾಗುತ್ತಿವೆಯೇ. ಈ ಬೆಳವಣಿಗೆಯಿಂದ ಸಮಸ್ಯೆ ಎದುರಿಸುತ್ತಿದ್ದೀರಾ. ಈ ಬಗ್ಗೆ ಧ್ವನಿ ಎತ್ತಲು ‘ಪ್ರಜಾವಾಣಿ’ ವೇದಿಕೆ ಒದಗಿಸಲಿದೆ.

ಈ ಸಮಸ್ಯೆ ಬಗ್ಗೆ ಚರ್ಚಿಸಲು ಇದೇ 22ರಂದು ಸಂಜೆ 4.30ಕ್ಕೆ ರಾಜಭವನ ರಸ್ತೆ ಬಳಿಯ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ‘ವಸತಿ ಪ್ರದೇಶದ ವಾಣಿಜ್ಯೀಕರಣದ ಸುತ್ತ ಒಂದು ಚರ್ಚೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ನಗರಾ ಯೋಜನಾ ತಜ್ಞ ವಿ.ರವಿಚಂದರ್‌ ಹಾಗೂ ‘ಐ ಚೇಂಜ್‌ ಇಂದಿರಾ ನಗರ’ ಸಂಘಟನೆಯ ಸ್ವರ್ಣಾ ವೆಂಕಟರಾಮನ್‌ ಅವರು ಈ ಸಮಸ್ಯೆ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೂ ಈ ಕಾರ್ಯಕ್ರಮದಲ್ಲಿ ‍ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಭಾಗವಹಿಸಬಹುದು. ಹೆಸರು ನೋಂದಾಯಿಸಲು ಲಾಗ್‌ ಆನ್‌ ಮಾಡಿ: http://bit.ly/DHCivicAmenities

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT