ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಬದ್ಧ: ಯಡಿಯೂರಪ್ಪ

ಉಪ ಮುಖ್ಯಮಂತ್ರಿಯಿಂದ ಸಂಶೋಧನಾ ವರದಿ ಬಿಡುಗಡೆ
Last Updated 4 ಜನವರಿ 2020, 17:22 IST
ಅಕ್ಷರ ಗಾತ್ರ

ಬೆಂಗಳೂರು: ‘ಅಲೆಮಾರಿ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಆಶ್ರಯದಲ್ಲಿ ಗಾಂಧಿಭವನದಲ್ಲಿ ‘ಅಲೆಮಾರಿಗಳ ಸಮಸ್ಯೆ, ಸವಾಲುಗಳು ಹಾಗೂ ಪರಿಹಾರೋಪಾಯಗಳು’ ಸಮಾಲೋಚನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಲೆಮಾರಿ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಇದಕ್ಕೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ’ ಎಂದು ಅವರು ತಿಳಿಸಿದರು.

‘ಉಪ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದೆ. ಸಮುದಾಯದ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುವುದು. ಸಮುದಾಯದ ಯಾವ ಮಗುವೂ ಶಾಲೆಯಿಂದ ಹೊರಕ್ಕೆ ಉಳಿಯಬಾರದು’ ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ‘ಪ್ರಬಲ ಹಾಗೂ ಮುಂದುವರಿದ ಜಾತಿಗಳು ಮೀಸಲಾತಿ ಪಟ್ಟಿಯೊಳಗೆ ಸೇರಿ, ಸೌಲಭ್ಯಗಳನ್ನು ಪಡೆಯುತ್ತಿರುವುದು ವಿಷಾದನೀಯ. ಅನರ್ಹರು ಮೀಸಲಾತಿ ಸೌಲಭ್ಯ ಪಡೆದರೆ ಕಳ್ಳತನ‌ ಮಾಡಿದಷ್ಟೇ ಅಪರಾಧ. ಸರ್ಕಾರಗಳು ಒತ್ತಡಕ್ಕೆ ಮಣಿಯದೇ ಅರ್ಹರಿಗೆ ಮಾತ್ರ ಮೀಸಲಾತಿ ಸೌಲಭ್ಯ ನೀಡಬೇಕು’ ಎಂದರು.

‘ಕರ್ನಾಟಕದಲ್ಲೂ ಕೆಲವು ಮುಂದುವರಿದ ಜಾತಿಗಳು ಮೀಸಲಾತಿ ಪಟ್ಟಿಯೊಳಗೆ ಸೇರ್ಪಡೆಯಾಗಿರುವುದು ದುರ್ದೈವ. ಇದರಿಂದ ಅರ್ಹರು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಅರ್ಹರೆಲ್ಲರೂ ಮೀಸಲಾತಿ ಪಟ್ಟಿಯೊಳಗೆ ಬರಬೇಕು’ ಎಂದರು.

‘ಅಲೆಮಾರಿಗಳ ಅಭಿವೃದ್ಧಿ ಕೋಶಕ್ಕೆ ₹106 ಕೋಟಿ ನೀಡಲಾಗಿದೆ’ ಎಂದು ತಿಳಿಸಿದರು.

ಅಲೆಮಾರಿ ಸಮುದಾಯದ ಬೇಡಿಕೆಗಳು

*ಅಲೆಮಾರಿ ಅಧ್ಯಯನ ಕೇಂದ್ರ ಸ್ಥಾಪನೆ

*ಅಲೆಮಾರಿ ಅಕಾಡೆಮಿ ಆರಂಭ

*ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ

*ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ

*ಸಮುದಾಯಕ್ಕೆ ಕೃಷಿ ಯೋಗ್ಯ ಜಮೀನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT