ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ನೀತಿ ಅಧ್ಯಯನಕ್ಕೆ ಸಮಿತಿ ರಚನೆ

ವಾಹನ ಖರೀದಿಸುವವರು ಪಾರ್ಕಿಂಗ್‌ ಸ್ಥಳಾವಕಾಶದ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ
Last Updated 1 ಡಿಸೆಂಬರ್ 2020, 22:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಅವೈಜ್ಞಾನಿಕ ವಾಹನ ನಿಲುಗಡೆಯನ್ನು ತಪ್ಪಿಸುವ ಉದ್ದೇಶದಿಂದ ಹೊಸ ಪಾರ್ಕಿಂಗ್ ನೀತಿ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಷ್ಟೇ ಅಲ್ಲ, ನಗರದಲ್ಲಿ ಇನ್ನು ಮುಂದೆ ವಾಹನ ಖರೀದಿಸುವವರು, ತಮ್ಮ ವಾಹನ ಪಾರ್ಕಿಂಗ್‌ ಮಾಡಲು ಸ್ಥಳಾವಕಾಶವಿದೆಎಂಬ ಬದ್ಧತಾ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಈ ಕುರಿತು ಸಾಧಕಭಾದಕಗಳ ಬಗ್ಗೆ ಅಧ್ಯಯನ ನಡೆಸಿ ಕರಡು ನೀತಿ ರೂಪಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ‘ಪಾರ್ಕಿಂಗ್‌ ಶುಲ್ಕವನ್ನು ಯಾವ ರೀತಿ ಸಂಗ್ರಹಿಸಬೇಕು ಮತ್ತು ಇತರ ಮಾನದಂಡಗಳು ಹಾಗೂ ಮಾರ್ಗಸೂಚಿಯನ್ನು ತಯಾರಿಸಿ ಕರಡು ನೀತಿಯನ್ನು ಮುಖ್ಯ ಕಾರ್ಯದರ್ಶಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ, ಜಾರಿಗೆ ತರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

’ನಗರದಲ್ಲಿ ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಬಹುದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಈ ಕಾರಣದಿಂದ ಒಂದು ಕಠಿಣವಾದ ಪಾರ್ಕಿಂಗ್ ನೀತಿ ತರಲಾಗುತ್ತಿದೆ’ ಎಂದರು.

‘ಬಹುತೇಕ ಕಡೆಗಳಲ್ಲಿ ವಾಹನಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸುವಂಥ ಪರಿಪಾಠ ಬೆಳೆದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವು ದೂರುಗಳು ಬಂದಿವೆ. ಈ ಸಮಸ್ಯೆಯನ್ನು ಪರಿಹರಿಸಲು ಹೊಸ ಪಾರ್ಕಿಂಗ್ ನೀತಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ’ ಎಂದು ವಿವರಿಸಿದರು.

‘ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲಾಗುತ್ತದೆ. ಕೆಲವು ಕಡೆಗಳಲ್ಲಿ ಮನೆಯ ಮುಂದೆ, ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಕೆಲವು ಜನನಿಬಿಡ ಪ್ರದೇಶಗಳಲ್ಲಿ ಬೆಳಿಗ್ಗೆ ವಾಹನಗಳನ್ನು ನಿಲ್ಲಿಸಿದರೆ ಸಂಜೆಯ ಬಳಿಕವೇ ತೆಗೆಯಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಮತ್ತು ಇತರೆ ವಾಹನಗಳ ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟಾಗುತ್ತಿದೆ. ಈ ಎಲ್ಲ ಕಾರಣಗಳಿಗೆ ಪಾರ್ಕಿಂಗ್‌ ನೀತಿ ಅಗತ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದರು.

‘ನಗರದಲ್ಲಿ ಪ್ರಸ್ತುತ 80-85 ಸ್ಥಳಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ನಗರದ ಎಲ್ಲ ಕಡೆ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವ ಅನಿವಾರ್ಯತೆ ಇದೆ ಎಂದೂ ತಿಳಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT