ಸೋಮವಾರ, ಮಾರ್ಚ್ 1, 2021
24 °C
ಸಮರ್ಥ ಭಾರತ ಸಂಸ್ಥೆಯ ಪ್ರಧಾನ ಮಾರ್ಗದರ್ಶಕ ಎನ್‌. ತಿಪ್ಪೇಸ್ವಾಮಿ ಬೇಸರ

‘ನೀರು ಇಂಗುವಿಕೆಗೆ ಕಾಂಕ್ರಿಟ್ ರಸ್ತೆ ತೊಡಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಲ್ಲೆಡೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಇದರಿಂದಾಗಿ ಜಲಮೂಲಗಳು ಬತ್ತುತ್ತಿವೆ’ ಎಂದು ಸಮರ್ಥ ಭಾರತ ಸಂಸ್ಥೆಯ ಪ್ರಧಾನ ಮಾರ್ಗದರ್ಶಕ ಎನ್‌. ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸಮರ್ಥ ಭಾರತ ಸಂಸ್ಥೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಲಸಂರಕ್ಷಣೆ ಕಾರ್ಯಾಗಾರದಲ್ಲಿ ಮಾತ
ನಾಡಿದರು.

‘ಮಳೆಯ ಪ್ರಮಾಣದಲ್ಲಿ ಅಷ್ಟಾಗಿ ಕಡಿಮೆಯಾಗಿಲ್ಲ. ಆದರೆ, ನೀರಿನ ಸಮಸ್ಯೆ ಮಾತ್ರ ಒಂದೇ ಸಮನೆ ಹೆಚ್ಚುತ್ತಿದೆ. ಮಳೆಯ ನೀರು ಭೂಮಿಯಲ್ಲಿ ಇಂಗಲು ಅವಕಾಶ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಬಿದ್ದ ನೀರು ಭೂಮಿಯಲ್ಲಿ ಇಂಗಲು ರಸ್ತೆ ಬದಿ, ಉದ್ಯಾನ ಹಾಗೂ ಮನೆಯ ಸುತ್ತಮುತ್ತ ಇಂಗುಗುಂಡಿಗಳನ್ನು ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು. 

‘ಅತಿಯಾದ ಪ್ಲಾಸ್ಟಿಕ್ ಬಳಕೆ ಸಹ ಮಳೆ ನೀರು ಇಂಗಲು ತೊಡಕಾಗಿದೆ. ಮಣ್ಣಿನ ಒಳಗಡೆ ಪ್ಲಾಸ್ಟಿಕ್ ಪದರವಾಗಿ ಮಾರ್ಪಡುತ್ತಿದೆ. ಹಾಗಾಗಿ ಭೂಮಿಯಲ್ಲಿ ಕರಗುವಂತಹ ಪರ್ಯಾಯ ವಸ್ತುಗಳನ್ನು ಬಳಕೆ ಮಾಡಬೇಕು’ ಎಂದರು. 

‘ಒಂದು ಕಾಲದಲ್ಲಿ ನಗರದಲ್ಲಿ 800ಕ್ಕೂ ಅಧಿಕ ಕೆರೆಗಳು ಇದ್ದವು. ಇದೀಗ 200 ಕೆರೆಗಳಿದ್ದು, ಅವುಗಳು ಕೂಡಾ ಪರಿಸರ ವಿರೋಧಿ ಚಟುವಟಿಕೆಯಿಂದ ಮರೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಸದ್ಯ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಜಲತಜ್ಞ ನಾರಾಯಣ ಶೆಣೈ ಮಾತನಾಡಿ, ‘ಕೆರೆಗಳು ಕಣ್ಮರೆಯಾಗುತ್ತಿದ್ದು, ಆ ಜಾಗದಲ್ಲಿ ಮನೆ, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ರಸ್ತೆ, ಬಸ್ ನಿಲ್ದಾಣ ಹಾಗೂ ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ. ಇದರಿಂದಾಗಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನವಿದ್ದರೂ ಕೂಡಾ ನೀರಿನ ಸಮಸ್ಯೆಯಿದೆ. ಕಳೆದ ಎರಡು ದಶಕದಲ್ಲಿ ದೇಶದಲ್ಲಿ 2.97 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು. 

‘ಜಲಚಕ್ರದ ಮೇಲೆ ಮಾನವನ ಆಕ್ರಮಣ ಹೆಚ್ಚಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಶಮನವಾಗುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನೀರನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

 ‘ನೀರು ಮಾರಾಟ: ಭಾರತ ದೊಡ್ಡ ಮಾರುಕಟ್ಟೆ’

‘ಜಗತ್ತಿನಲ್ಲಿಯೇ ಅತಿ ದೊಡ್ಡ ನೀರು ಮಾರಾಟ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ. ಕುಡಿಯುವ ನೀರು ಹಾಗೂ ಅಸ್ಪೃಶ್ಯತೆ ಸಮಾಜವನ್ನು ಈಗಲೂ ಕಾಡುತ್ತಿದೆ. ರಾಜಸ್ಥಾನದಲ್ಲಿ 87 ನಗರಗಳಿಗೆ ಟ್ಯಾಂಕರ್‌ಗಳ ಮೂಲಕವೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂದೊಂದು ದಿನ ನೀರನ್ನು ಕೂಡ ಬೇರೆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ’ ಎಂದು ಜಲತಜ್ಞ ನಾರಾಯಣ ಶೆಣೈ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು