ಶನಿವಾರ, ಜನವರಿ 28, 2023
21 °C

ಬಿಜೆಪಿಯಲ್ಲಿ ನಾನೊಂದು ತೀರಾ, ನೀನೊಂದು ತೀರ: ರಮೇಶ್ ಬಾಬು ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮುಗಿಲು ಮುಟ್ಟಿದೆ. ಯಡಿಯೂರಪ್ಪ– ಬೊಮ್ಮಾಯಿ ನಾನೊಂದು ತೀರಾ, ನೀನೊಂದು ತೀರ ದಂತಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ಇದೇ ಕಾರಣಕ್ಕೆ ತಪ್ಪಿಸಿ ಕೊಂಡರು’ ಎಂದು ಕೆಪಿಸಿಸಿ ಮಾಧ್ಯಮ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ದೆಹಲಿಯ ಕಾರ್ಯಕಾರಿಣಿ ಸಭೆಯ ಸಮಯದಲ್ಲಿ 30 ಶಾಸಕರು ಸಹಿ ಮಾಡಿ ಬೊಮ್ಮಾಯಿ ಅವರ ನಾಯಕತ್ವ ಬದಲಾಗಬೇಕು ಎಂದು ಪತ್ರ ಬರೆದಿದ್ದಾರೆ. ಇದನ್ನು ಬರೆದಿರುವವರು ಯಡಿಯೂರಪ್ಪನವರ ಬೆಂಬಲಿಗರು. ಅವರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಸಿದ್ಧರಿಲ್ಲ’ ಎಂದರು.

‘ನಳಿನ್ ಕುಮಾರ್, ಸಿ.ಟಿ. ರವಿ ಅವರದ್ದು ಒಂದು ತಂಡ, ಯತ್ನಾಳ್ ಅವರದ್ದು ಮತ್ತೊಂದು ತಂಡ, ಬೊಮ್ಮಾಯಿ ಅವರದ್ದು, ಯಡಿಯೂರಪ್ಪ ಅವರದ್ದು ಪ್ರತ್ಯೇಕ ತಂಡ. ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ತಮ್ಮ ಪಕ್ಷದ ನಾಯಕರ ಜತೆ ವ್ಯವಹಾರ ಮಾಡಲು ಸಮಯ ಸಾಲುತ್ತಿಲ್ಲ’ ಎಂದು ಟೀಕಿಸಿದರು.

‘ಯೋಗ್ಯತೆ ಇದ್ದರೆ ದಾಖಲೆಗಳ ಸಹಿತ ಬಿಜೆಪಿಯವರು ಚರ್ಚೆಗೆ ಬರಲಿ. ನಾವು ಚರ್ಚೆಗೆ ಸಿದ್ಧ’ ಎಂದು ಸಚಿವ ಡಾ.ಕೆ. ಸುಧಾಕರ್‌ ಆರೋಪಕ್ಕೆ ಎಂ. ಲಕ್ಷ್ಮಣ್‌ ತಿರುಗೇಟು ನೀಡಿದರು.

‘2013ರಿಂದ 2018ರವರೆಗಿನ ಸಿಎಜಿ ವರದಿ ಉಲ್ಲೇಖಿಸಿ ₹ 35 ಸಾವಿರ ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಸುಧಾಕರ್‌ ಸುಳ್ಳು ಹೇಳಿದ್ದಾರೆ. ಚಿಕ್ಕಬಳ್ಳಾಪುರದ ಜನರ ಪ್ರಕಾರ, ಸುಧಾಕರ್ ಅವರ ಅಕ್ರಮಗಳ ಬಗ್ಗೆ ಸುಮಾರು 40 ದೂರುಗಳಿವೆ. ಕೋವಿಡ್ ಸಮಯದಲ್ಲಿ ಪ್ರತಿ ಉಪಕರಣ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು