ಬೆಂಗಳೂರು: ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಆಫ್ರಿದ್ ಖಾನ್‌ನನ್ನು (27) ಬಂಧಿಸಲಾಗಿದೆ.
‘ಜಗಜೀವನ್‌ರಾಮ್ ನಗರ ನಿವಾಸಿ ಆಫ್ರಿದ್ ಖಾನ್, ಅಪರಾಧ ಹಿನ್ನೆಲೆಯುಳ್ಳ. ಈತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಬಂದಿದ್ದ. ಕಾನ್‌ಸ್ಟೆಬಲ್‌ಗಳಿಬ್ಬರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇದೀಗ ಪುನಃ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಆಫ್ರಿದ್ ಖಾನ್, ಅನಂತರಾಮಯ್ಯ ಕಾಂಪೌಂಡ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ. ಗಸ್ತಿನಲ್ಲಿದ್ದ ಶಿವಪ್ರಸಾದ್ ಧನರೆಡ್ಡಿ ಹಾಗೂ ವಿಜಯ್‌ಕುಮಾರ್, ಆಫ್ರಿದ್ ಖಾನ್‌ನನ್ನು ತಡೆದು ಪ್ರಶ್ನಿಸಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.’
‘ಪೊಲೀಸರು ನನಗೆ ಪದೇ ಪದೇ ತೊಂದರೆ ಕೊಡುತ್ತಿದ್ದಿರಾ. ಇನ್ನೊಮ್ಮೆ ನನ್ನ ತಂಟೆಗೆ ಬರದಂತೆ ಮಾಡುತ್ತೇನೆ’ ಎಂದು ಕೂಗಾಡಿದ್ದ ಆರೋಪಿ, ಬೆನ್ನ ಹಿಂದೆ ಶರ್ಟ್ ಒಳಗೆ ಇಟ್ಟುಕೊಂಡಿದ್ದ ಮಚ್ಚು ಹೊರಗೆ ತೆಗೆದಿದ್ದ. ಕಾನ್‌ಸ್ಟೆಬಲ್ ಶಿವಪ್ರಸಾದ್ ಅವರ ತಲೆಗೆ ಮಚ್ಚಿನಿಂದ ಹೊಡೆದಿದ್ದ. ವಿಜಯ್‌ಕುಮಾರ್ ಅವರಿಗೆ ಮಚ್ಚಿನಿಂದ ಹೊಡೆಯಲು ಹೋಗಿದ್ದ. ಅವರು ಕೈ ಅಡ್ಡ ಹಿಡಿದಿದ್ದರು. ಕೈಗೆ ಪೆಟ್ಟಾಗಿತ್ತು’ ಎಂದು ಪೊಲೀಸರು ತಿಳಿಸಿದರು.
‘ಇಬ್ಬರೂ ಕಾನ್‌ಸ್ಟೆಬಲ್‌ಗಳು, ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು. ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಆಫ್ರಿದ್ ಖಾನ್‌ನನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.