ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕುಗಳಿಗೆ ಭಿಕ್ಷೆ ಬೇಡಬೇಕಿಲ್ಲ’

ಸಂವಿಧಾನ ದಿನಾಚರಣೆ ಕಾರ್ಯಕ್ರಮ
Last Updated 26 ನವೆಂಬರ್ 2019, 18:15 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನ ಕೊಡಮಾಡಿದ ಹಕ್ಕುಗಳನ್ನು ವ್ಯಾಜ್ಯಕರ್ತರು ಭಿಕ್ಷೆ ಬೇಡಿ ಪಡೆಯುತ್ತಿದ್ದಾರೆ ಎಂದು ಭಾವಿಸಬಾರದು ಮತ್ತು ಆ ರೀತಿ ನಡೆದುಕೊಳ್ಳಲೂಬಾರದು. ಪ್ರತಿಯೊಬ್ಬರೂ ಅವುಗಳನ್ನು ದಾರ್ಷ್ಟ್ಯದ ಮೂಲಕ ಪಡೆಯುವಂತಹ ನ್ಯಾಯಾಂಗ ವ್ಯವಸ್ಥೆ ನಮ್ಮದಾಗಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮುಂಬರುವ ದಿನಗಳಲ್ಲಿ ತಂತ್ರಜ್ಞಾನದ ಆಧುನಿಕತೆ ನ್ಯಾಯಾಂಗ ಕ್ಷೇತ್ರವನ್ನೂ ಗಾಢವಾಗಿ ವ್ಯಾಪಿಸಲಿದೆ. ಇದರಿಂದಾಗಿ ಕೋರ್ಟ್‌ಗಳು ವ್ಯಾಜ್ಯಗಳನ್ನು ನಿರ್ಣಯಿಸುವಾಗ ತತ್ವ ಮತ್ತು ತಂತ್ರಗಳು ನಿಷ್ಪ್ರಯೋಜಕ ಎನಿಸಬಹುದು. ಹಾಗಾಗಿ ಇಂತಹ ಬಹುದೊಡ್ಡ ನಿರೀಕ್ಷಿತ ಸವಾಲು ಎದುರಿಸಲು ನಮ್ಮ ದೇಶದ ನ್ಯಾಯಾಂಗ ಮತ್ತು ಯುವ ವಕೀಲರು ತಮ್ಮದೇ ಆದ ಪರಿಶ್ರಮಗಳ ಮೂಲಕ ಎತ್ತರಕ್ಕೇರಲು ಪ್ರಯತ್ನಿಸಬೇಕು’ ಎಂದರು.

‘ಅಮೆರಿಕ ಮತ್ತು ಬ್ರಿಟನ್‌ ನ್ಯಾಯಮೂರ್ತಿಗಳಂತೆ ನಮ್ಮವರೂ ಸ್ವಂತಿಕೆ ಮೆರೆಯಬೇಕು’ ಎಂದು ಅವರು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ, ‘ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಸಲ್ಲದು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಕೆ.ಬಿ.ನಾಯಕ್‌ ಮಾತನಾಡಿದರು. ನ್ಯಾಯಮೂರ್ತಿ ರವಿ ಮಳಿಮಠ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ರಾಜ್ಯ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜ್‌, ಹೈಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT