ಬುಧವಾರ, ಜನವರಿ 22, 2020
19 °C

ಮುನ್ಸೂಚನೆ ನೀಡದೆ ಬಸ್‌ ಸೇವೆ ರದ್ದು: ಕೆಎಸ್‌ಆರ್‌ಟಿಸಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುನ್ಸೂಚನೆ ನೀಡದೆ ಬಸ್‌ ಸೇವೆ ರದ್ದುಗೊಳಿಸಿ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ₹ 20 ಸಾವಿರ ದಂಡ ವಿಧಿಸಿದೆ.

ಈ ಕುರಿತಂತೆ ಹೈಕೋರ್ಟ್ ವಕೀಲರೂ ಆದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಂಬಾರು ಕಟ್ಟೆ ನಿವಾಸಿ ಕಿರಣ್ ಕುಮಾರ್‌ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ನ್ಯಾಯಾಧೀಶರಾದ ಆರ್.ಕೆ.ಬಲ ಹಾಗೂ ಎನ್‌.ಆರ್‌.ರೂಪಾ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ.

‘ದೂರುದಾರರಿಗೆ ಟಿಕೆಟ್‌ನ ಮೊತ್ತ ₹ 690, ದಂಡದ ರೂಪದಲ್ಲಿ ₹ 20 ಸಾವಿರ ಹಾಗೂ ₹ 5 ಸಾವಿರವನ್ನು ಪ್ರಕರ
ಣದ ವೆಚ್ಚವಾಗಿ ಈ ಆದೇಶ ದೊರೆತ 30 ದಿನಗಳ ಒಳಗೆ ಪಾವತಿಸಬೇಕು’ ಎಂದು ನಿರ್ದೇಶಿಸಲಾಗಿದೆ.

ಪ್ರಕರಣವೇನು?

ಕಿರಣ್‌ ಕುಮಾರ್ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಲು 2018ರ ಮಾರ್ಚ್‌ 15ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಾಜಹಂಸ ಬಸ್‌ನಲ್ಲಿ ತೆರಳಿದ್ದರು. ಮರುದಿನ ಕೊಲ್ಲೂರಿನಿಂದ ಬೆಂಗಳೂರಿಗೆ
ವಾಪಸು ಬರಲು ಐರಾವತ ಬಸ್‌ನ ಮುಂಗಡ ಟಿಕೆಟ್‌ ಖರೀದಿಸಿದ್ದರು.

ಶಿವಮೊಗ್ಗಕ್ಕೆ ಪ್ರಯಾಣ ಮಾಡಿ ಅಲ್ಲಿಂದ ಮತ್ತೊಂದು ಬಸ್‌ನಲ್ಲಿ ಕೊಲ್ಲೂರಿಗೆ ತೆರಳಿದ್ದರು. ಕೊಲ್ಲೂರಿನಲ್ಲಿ ತಮ್ಮ ಕೆಲಸ ಕಾರ್ಯ ಪೂರೈಸಿಕೊಂಡು ಪುನಃ ಬೆಂಗಳೂರಿಗೆ ವಾಪಸಾಗಲು 2018ರ ಮಾರ್ಚ್‌ 16ರಂದು ರಾತ್ರಿ 8.15ಕ್ಕೆ ಮುಂಗಡ ಟಿಕೆಟ್‌ ಖರೀದಿಸಿದ್ದ ಐರಾವತ ಬಸ್‌ಗಾಗಿ ಕಾಯ್ದರು. ಆದರೆ, ಆ ರಾತ್ರಿ 9.15ರವರೆಗೂ ಬಸ್ ಬರಲಿಲ್ಲ.

ಈ ಬಗ್ಗೆ ಕಿರಣ್‌ ಕುಮಾರ್ ಕುಂದಾಪುರ ಡಿಪೊ ಮ್ಯಾನೇಜರ್ ಅವರನ್ನು ಫೋನ್‌ ಮುಖಾಂತರ ಸಂಪರ್ಕಿಸಿದಾಗ, ‘ಆ ಬಸ್‌ ಬೆಂಗಳೂರಿನಿಂದ ಇಲ್ಲಿಗೆ ಬಂದಿಲ್ಲ. ಈ ವಿಷಯ ಬೆಂಗಳೂರು ಡಿಪೋಗೆ ಸಂಬಂಧಿಸಿದ್ದು’ ಎಂದು ಪ್ರತಿಕ್ರಿಯಿಸಿದ್ದರು.

ಆದರೆ, ಅದೇ ದಿನ ಸಂಜೆ ಕಿರಣ್‌ ಕುಮಾರ್ ಅವರ ಫೋನ್‌ಗೆ ಸಂಸ್ಥೆಯಿಂದ ಬಂದಿದ್ದ ಸಂದೇಶದಲ್ಲಿ, ‘ಸಂಜೆ 5.59ಕ್ಕೆ ಸರಿಯಾಗಿ ಬಸ್‌ ನಿಲ್ದಾಣಕ್ಕೆ ಬರುತ್ತದೆ’ ಎಂದು ತಿಳಿಸಲಾಗಿತ್ತು.

‘ಬಸ್‌ ಬಾರದೆ ನಾನು ತೊಂದರೆಗೊಳಗಾದೆ. ಟ್ಯಾಕ್ಸಿ ಮಾಡಿಕೊಂಡು 2018ರ ಮಾರ್ಚ್‌ 17ರಂದು ಬೆಂಗಳೂರಿಗೆ ವಾಪಸಾದೆ. ಬಸ್‌ ಬರುತ್ತದೆ ಎಂಬ ಸಂದೇಶವನ್ನು ಸಂಸ್ಥೆಯು ನನಗೆ ಕಳುಹಿಸಿತ್ತು. ಸಂಬಂಧಿಸಿದ ಅಧಿಕಾರಿಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಸೌಜನ್ಯವನ್ನೂ ತೋರಲಿಲ್ಲ. ಟಿಕೆಟ್‌ ಹಣವನ್ನೂ ಹಿಂದಿರುಗಿಸಲಿಲ್ಲ. ನನ್ನ ಪತ್ರಕ್ಕೆ ಉತ್ತರವನ್ನೂ ನೀಡಲಿಲ್ಲ. ಆದ್ದರಿಂದ ನನಗಾಗಿರುವ ತೊಂದರೆ ಹಾಗೂ ಮಾನಸಿಕ ಯಾತನೆಗೆ ಪರಿಹಾರ ನೀಡಬೇಕು’ ಎಂದು ವೇದಿಕೆ ಮೊರೆ ಹೋಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು