ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ಕಾನ್‌ಸ್ಟೆಬಲ್‌ಗೆ ಕೊರೊನಾ ಸೋಂಕು

ಟಿಪ್ಪುನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸೋಂಕಿತ ಸಿಬ್ಬಂದಿ
Last Updated 23 ಮೇ 2020, 19:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ಠಾಣೆಯೊಂದರ ಕಾನ್‌ಸ್ಟೆಬಲ್‌ಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ, ಮತ್ತೊಬ್ಬ ಕಾನ್‌ಸ್ಟೆಬಲ್‌ಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಂಕರ ನಗರದ ನಿವಾಸಿಯಾಗಿರುವ 34 ವರ್ಷದ ಕಾನ್‌ಸ್ಟೆಬಲ್, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಯೊಬ್ಬರ ಕಾರು ಚಾಲಕರಾಗಿದ್ದರು. ಅವರನ್ನು ಏಪ್ರಿಲ್ 26ರಂದು ಎಸಿಬಿಯ ಕರ್ತವ್ಯವಿಂದ ಬಿಡುಗಡೆ ಮಾಡಿ ಭದ್ರತಾ ಕೆಲಸಕ್ಕೆಂದು ಪಶ್ಚಿಮ ವಿಭಾಗ ವ್ಯಾಪ್ತಿಯ ಠಾಣೆಯೊಂದಕ್ಕೆ ನಿಯೋಜಿಸಲಾಗಿತ್ತು.

ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್) ಎಂದು ಘೋಷಿಸಿದ್ದ ಟಿಪ್ಪುನಗರದಲ್ಲಿ ಕಾನ್‌ಸ್ಟೆಬಲ್‌ ಭದ್ರತೆ ಕೆಲಸ ನಿರ್ವಹಿಸಿದ್ದರು. ಚೆಕ್‌ಪೋಸ್ಟ್‌ನಲ್ಲೂ ಕರ್ತವ್ಯ ನಿರ್ವಹಿಸಿ ವಾಹನಗಳ ತಪಾಸಣೆ ನಡೆಸಿದ್ದರು.

ಮೂರು ದಿನಗಳ ಹಿಂದೆ ಕಾನ್‌ಸ್ಟೆಬಲ್‌ಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ಟಿಪ್ಪುನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ‌ಮಾಹಿತಿ ಪಡೆದ ವೈದ್ಯರು, ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಕೋವಿಡ್‌ 19 ಪರೀಕ್ಷೆಗೆ ಕಳುಹಿಸಿದ್ದರು. ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್‌) ಸೂಚಿಸಿದ್ದರು. ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಕಾನ್‌ಸ್ಟೆಬಲ್ ಸೋಂಕು ಹೊಂದಿರುವುದು ಧೃಡಪಟ್ಟಿತ್ತು.

ಗರ್ಭಿಣಿ ಪತ್ನಿ ಊರಿಗೆ : ಕಾನ್‌ಸ್ಟೆಬಲ್ ಅವರ ಪತ್ನಿ ಗರ್ಭಿಣಿ ಆಗಿದ್ದರು. ತಿಂಗಳ ಹಿಂದಷ್ಟೇ ಪತ್ನಿಯನ್ನು ಸ್ವಂತ ಊರಿಗೆ ಕಳುಹಿಸಿದ್ದ ಕಾನ್‌ಸ್ಟೆಬಲ್, ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದರು.

ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಕಾನ್‌ಸ್ಟೆಬಲ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜೊತೆಗೆ ಶನಿವಾರವೂ ಮತ್ತೊಮ್ಮೆ ಗಂಟಲಿನ ದ್ರವನ್ನು ಸಂಗ್ರಹಿಸಿ ಎರಡನೇ ಪರೀಕ್ಷೆಗಾಗಿ ರವಾನಿಸಲಾಗಿದೆ.

ಟಿಪ್ಪುನಗರದಲ್ಲಿ ಕರ್ತವ್ಯದಲ್ಲಿದ್ದ ಸಹೋದ್ಯೋಗಿಗಳ ಜೊತೆಯೂ ಈ ಕಾನ್‌ಸ್ಟೆಬಲ್ ಒಡನಾಟವಿಟ್ಟುಕೊಂಡಿದ್ದರು. ಸ್ಥಳೀಯ ಠಾಣೆಗೂ ಆಗಾಗ ಹೋಗಿಬರುತ್ತಿದ್ದರು. ಕಾನ್‌ಸ್ಟೆಬಲ್ ಜೊತೆ ಸಂಪರ್ಕವಿಟ್ಟುಕೊಂಡಿದ್ದವರನ್ನು ಪತ್ತೆಹಚ್ಚುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನೂ ಪ್ರತ್ಯೇಕ ವಾಸಕ್ಕೆ ಒಳಪಡಿಸುತ್ತಿದ್ದಾರೆ.

ಕಾನ್‌ಸ್ಟೆಬಲ್ ಕೆಲಸ ಮಾಡಿದ್ದ ಸ್ಥಳ, ವಾಸವಿದ್ದ ಮನೆ ಹಾಗೂ ಸುತ್ತಮುತ್ತ ಸ್ಥಳದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಮನೆಯ ಪ್ರದೇಶವನ್ನೂ ಸೀಲ್‌ಡೌನ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT